image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಗದ್ವೇಷ ಮೀರಿದ ಬದುಕು ಆದರ್ಶಮಯ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ

ರಾಗದ್ವೇಷ ಮೀರಿದ ಬದುಕು ಆದರ್ಶಮಯ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ

ಉಜಿರೆ: "ರಾಗದ್ವೇಷಗಳು ತುಂಬಿದಲ್ಲಿ ಪ್ರೀತಿ ದಾರಿತಪ್ಪುತ್ತದೆ. ಅದನ್ನು ಮೀರಿದಾಗ ಮಾತ್ರ ನಾವು ಆದರ್ಶ ಬದುಕನ್ನು ಬಾಳಲು ಸಾಧ್ಯ," ಎಂದು ಒಡಿಯೂರಿನ ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಸುದರ್ಶನ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. "ರಾಜನಂತೆ ಬದುಕು, ಸನ್ಯಾಸಿಯಂತೆ ಯೋಚಿಸು ಎಂಬ ತತ್ವದಂತೆ ಬದುಕಬೇಕು. ತ್ಯಾಗದ ಗುಣವಿದ್ದರೆ ಎಲ್ಲಿಯಾದರೂ ರಾಜನಂತೆ ಬಾಳಬಹುದು," ಎಂದರು.

ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿ, ದೈವಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮನುಷ್ಯನಿಗೆ ಸಿಗುವ ಸುಯೋಗ. ದೇವರ ಚಿತ್ತವಿದ್ದರೆ ಮಾತ್ರ ಯಾವುದೇ ಕಾರ್ಯಗಳು ಸಂಪೂರ್ಣವಾಗಿ ನೆರವೇರುತ್ತವೆ ಎಂದು ತಿಳಿಸಿದರು.​ ಹಿರಿಯ ಸ್ವಯಂಸೇವಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, "ಭಾರತ ಎಲ್ಲರನ್ನೂ ಸಮಾನವಾಗಿ ಕಾಣುವ ಸಂಸ್ಕೃತಿಯನ್ನು ಹೊಂದಿದೆ. ಜಾತಿ ಭೇದ ಮರೆತು ಗುಣದ ಆಧಾರದಲ್ಲಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತಗಳ ಅಧ್ಯಯನ ನಡೆಯುವ ಮೂಲಕ ಧಾರ್ಮಿಕ ಅರಿವು ಮೂಡಬೇಕು," ಎಂದು ಕರೆ ನೀಡಿದರು.

ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, "ದಕ್ಷಿಣ ಕನ್ನಡ ಜಿಲ್ಲೆಯು 1200ಕ್ಕೂ ಹೆಚ್ಚು ದೇವಾಲಯಗಳನ್ನು ಹೊಂದಿದ್ದು, ಇಲ್ಲಿನ ಜನತೆ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುತ್ತಿದ್ದಾರೆ. ಶಾಂತಿ ಮತ್ತು ಸೌಹಾರ್ದದ ಹಾದಿಯಲ್ಲಿ ಸಾಗುತ್ತಿರುವ ಕರಾವಳಿ ಭಾಗ, ನಾಗರಿಕ ಶಿಷ್ಟಾಚಾರದ ಮೂಲಕ ಇಡೀ ಜಗತ್ತಿಗೆ ಭಾರತದ ಶ್ರೇಷ್ಠತೆಯನ್ನು ತೋರಿಸುತ್ತಿದೆ," ಎಂದು ಬಣ್ಣಿಸಿದರು. ತಿಮ್ಮನರಸರಾದ ಡಾ. ಪದ್ಮಪ್ರಸಾದ ಅಜಿಲ ಮಾತನಾಡಿ, "ಉಪಕಾರ ಮಾಡುವ ಬುದ್ಧಿ ಬೆಳೆಸಿಕೊಂಡರೆ ಮನಸ್ಸು ಶುದ್ಧವಾಗುತ್ತದೆ. ಉಜಿರೆಯ ಜನತೆಯ ಭಕ್ತಿ ಮತ್ತು ಶ್ರದ್ಧೆಗೆ ದೇವಸ್ಥಾನದ ವಿನ್ಯಾಸ ಮತ್ತು ರಾಜಗೋಪುರಗಳೇ ಸಾಕ್ಷಿ," ಎಂದರು. ಕೈಗಾರಿಕೋದ್ಯಮಿ ರಾಮದಾಸ ಮಡಮಣ್ಣಾಯ ತಮ್ಮ ಅನುಭವ ಹಂಚಿಕೊಂಡು, ಕಠಿಣ ನಿರ್ಧಾರ ಮತ್ತು ಪರಿಸರದಿಂದ ಕಲಿತ ಪಾಠಗಳೇ ಸಾಧನೆಗೆ ದಾರಿ ಎಂದರು.

​ಕಾರ್ಯಕ್ರಮದಲ್ಲಿ ಕೆ. ಪ್ರತಾಪ್ ಸಿಂಹ ನಾಯಕ್, ಕೆ. ಕೃಷ್ಣ ಸಂಪಿಗೆತ್ತಾಯ, ಜಯಂತ ಶೆಟ್ಟಿ, ರಾಜಪ್ರಸಾದ ರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಉಜಿರೆಯ ನಿವೃತ್ತ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಕನ್ಯಾಡಿ ಸ್ವಾಗತಿಸಿದರೆ, ಪ್ರಕಾಶ್ ಶೆಟ್ಟಿ ನೊಚ್ಚ ವಂದಿಸಿದರು.

Category
ಕರಾವಳಿ ತರಂಗಿಣಿ