image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಸ್ತೂರಿ ರಂಗನ್ ವರದಿ ಜಾರಿಯಾದರೆ ದ.ಕ.ಜಿಲ್ಲೆಯ ಮಕ್ಕಾಲು ಭಾಗ ಜನ ಬೀದಿಗೆ: ಕಿಶೋರ್ ಶಿರಾಡಿ

ಕಸ್ತೂರಿ ರಂಗನ್ ವರದಿ ಜಾರಿಯಾದರೆ ದ.ಕ.ಜಿಲ್ಲೆಯ ಮಕ್ಕಾಲು ಭಾಗ ಜನ ಬೀದಿಗೆ: ಕಿಶೋರ್ ಶಿರಾಡಿ

ಕಡಬ : ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ದಕ್ಷಿಣ ಕನ್ನಡ ಜಿಲ್ಲೆಯ ಮುಕ್ಕಾಲು ಭಾಗದ ಜನ ಬೀದಿಗೆ ಬರಬೇಕಾಗುತ್ತದೆ. ಈ ರೈತ ವಿರೋಧಿ, ಜನವಿರೋಧಿ ವರದಿಯನ್ನು ಕೈಬಿಡಬೇಕು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಕಿಶೋರ್ ಶಿರಾಡಿ ಆಗ್ರಹಿಸಿದರು.

ಕಡಬದಲ್ಲಿಂದು ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರುದ್ಧ ನಡೆದ ಬೃಹತ್​ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿತವಾದ ಗ್ರಾಮಗಳಲ್ಲಿ ಈಗಾಗಲೇ ಲಕ್ಷಾಂತರ ಜನರ ಕೃಷಿ ಭೂಮಿಗೆ ನೀಡಿರುವ ಹಕ್ಕು ಪತ್ರವನ್ನು ಕಸಿದುಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದರು.

ಪರಿಸರ ಸಂರಕ್ಷಣಾ ವರದಿಯನ್ನು ಕೃಷಿ ಭೂಮಿಗೆ ತೊಂದರೆಯಾಗದಂತೆ, ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ, ಪಶ್ಚಿಮ ಘಟ್ಟಕ್ಕೆ ಮಾತ್ರ ಅನ್ವಯವಾಗುವ ರೀತಿಯಲ್ಲಿ ಅನುಷ್ಠಾನ ಮಾಡಬೇಕು. ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ನವೆಂಬರ್ 12ರಂದು ಕುಕ್ಕೇ ಸುಬ್ರಹ್ಮಣ್ಯದಲ್ಲಿ 50 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಮುಖ ದಾಮೋಧರ ಗುಂಡ್ಯ ಮಾತನಾಡಿ, 'ಕಳೆದ ಹನ್ನೆರಡು ವರ್ಷಗಳಿಂದ ಮಾಧವ ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ವರದಿ ಘಟ್ಟ ಹಾಗೂ ಕರಾವಳಿಯ ಭಾಗದ ಜನರಿಗೆ ಶಾಪವಾಗಿ ಕಾಡುತ್ತಿವೆ. ಉದ್ದೇಶಿತ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾದರೆ ಕೇಂದ್ರದ ವರ್ಕಿಂಗ್ ಕಮಿಟಿಯ ಅನುಮತಿ ಪಡೆಯಬೇಕಾಗುತ್ತದೆ. ಇದನ್ನೆಲ್ಲಾ ಮಾಡಲು ಸಾಧ್ಯವಾಗದ ರೀತಿಯಲ್ಲಿ ನೋಡಿಕೊಂಡು ರೈತರು ತಾವಾಗಿಯೇ ಒಕ್ಕಲೆದ್ದು ಹೋಗುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಬಳಿಕ ಕಡಬ ಉಪ ತಹಸೀಲ್ದಾರ್ ಶಾಯಿದುಲ್ಲಾ ಖಾನ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Category
ಕರಾವಳಿ ತರಂಗಿಣಿ