ಮಂಗಳೂರು: ಕರಾವಳಿಯ ಸುಂದರ ತೀರ ತಣ್ಣೀರುಬಾವಿ ಬೀಚ್ ಇದೀಗ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ಮಾರ್ಚ್ 6ರಿಂದ 8ರವರೆಗೆ ‘ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ 2026’ ಪಂದ್ಯಾವಳಿಗಳು ನಡೆಯಲಿವೆ ಎಂದು ಯಂಗ್ ಇಂಡಿಯನ್ಸ್ ಮಂಗಳೂರು ಅಧ್ಯಾಯದ ಅಧ್ಯಕ್ಷ ಹಾಗೂ ಕೋಸ್ಟಲ್ ಕರ್ನಾಟಕ ಟೂರಿಸಂ ಡೆವಲಪ್ಮೆಂಟ್ ಕೌನ್ಸಿಲ್ ಸಿಇಒ ಶರಣ್ ಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ವಿವಿಧ ರಾಜ್ಯಗಳ ಶ್ರೇಷ್ಠ ತಂಡಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿವೆ. ಇದು ರಾಷ್ಟ್ರೀಯ ತಂಡಗಳ ಆಯ್ಕೆಗೆ ಪ್ರಮುಖ ವೇದಿಕೆಯಾಗಲಿದ್ದು, ‘ಇಂಡಿಯಾ ಅಲ್ಟಿಮೇಟ್’ ಆಶ್ರಯದಲ್ಲಿ ಹಾಗೂ ಕರ್ನಾಟಕ ಅಲ್ಟಿಮೇಟ್ ಪ್ಲೇಯರ್ಸ್ ಅಸೋಸಿಯೇಷನ್ (KUPA) ಆತಿಥ್ಯದಲ್ಲಿ ಈ ಕೂಟ ಆಯೋಜಿಸಲಾಗಿದೆ ಎಂದರು.
ಪ್ರತಿದಿನ ಬೆಳಿಗ್ಗೆ 6.30 ರಿಂದ 10.30 ಮತ್ತು ಸಂಜೆ 3.00 ರಿಂದ 6.45 ರವರೆಗೆ ಪಂದ್ಯಗಳು ನಡೆಯಲಿವೆ. ಈ ಕ್ರೀಡೆಯಲ್ಲಿ ಯಾವುದೇ ರೆಫ್ರಿ ಇರುವುದಿಲ್ಲ. ಆಟಗಾರರೇ ಸ್ವತಃ ನಿಯಮಗಳನ್ನು ಪಾಲಿಸುವ ‘ಸ್ಪಿರಿಟ್ ಆಫ್ ದಿ ಗೇಮ್’ ತತ್ವದಡಿ ಪಂದ್ಯಗಳು ನಡೆಯುತ್ತವೆ. 14 ವರ್ಷದಿಂದ 50 ವರ್ಷ ಮೇಲ್ಪಟ್ಟವರೂ ಈ ತಂಡದಲ್ಲಿ ಭಾಗವಹಿಸಲು ಅವಕಾಶವಿದೆ. ಇದು ಅಂತರಾಷ್ಟ್ರೀಯ ಮಟ್ಟದ ಮಾನ್ಯತೆ ಪಡೆದ ಕ್ರೀಡೆಯಾಗಿದ್ದು, ಒಲಿಂಪಿಕ್ ಫೆಡರೇಷನ್ ಕೂಡ ಇದನ್ನು ಅಂಗೀಕರಿಸಿದೆ.
ಈ ಹಿಂದೆ ಚೆನ್ನೈನಂತಹ ಪೂರ್ವ ತೀರದ ನಗರಗಳಲ್ಲಿ ನಡೆಯುತ್ತಿದ್ದ ಈ ಪ್ರತಿಷ್ಠಿತ ಟೂರ್ನಮೆಂಟ್, ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಜಿತ್, ಸುಹಾನಿ ಮೇಟಿ ಹಾಗೂ ಸುದೀಪ್ ಶೆಣೈ ಉಪಸ್ಥಿತರಿದ್ದರು.