ಮಂಗಳೂರು: ನಗರದ ವಾಹನ ಸವಾರರು ಹಾಗೂ ಸಾರ್ವಜನಿಕರ ದಶಕಗಳ ಕಾಲದ ಟ್ರಾಫಿಕ್ ಕಿರಿಕಿರಿಗೆ ಕೊನೆಗೂ ಪರಿಹಾರ ಸಿಗುವ ಲಕ್ಷಣಗಳು ಗೋಚರಿಸಿವೆ. ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ (LC No. 1) ರಸ್ತೆಯನ್ನು ಚತುಷ್ಪಥವಾಗಿ (Four-lane) ಅಭಿವೃದ್ಧಿಪಡಿಸಲು ದಕ್ಷಿಣ ರೈಲ್ವೆ ಇಲಾಖೆ ಅಧಿಕೃತ ಅನುಮೋದನೆ ನೀಡಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಕಚೇರಿ ತಿಳಿಸಿದೆ.
ಪಾಂಡೇಶ್ವರದ ಈ ಭಾಗದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ರಸ್ತೆಗಳು ನಾಲ್ಕು ಪಥಗಳನ್ನು ಹೊಂದಿದ್ದರೂ, ರೈಲ್ವೆ ವ್ಯಾಪ್ತಿಯ ರಸ್ತೆ ಮಾತ್ರ ದ್ವಿಪಥವಾಗಿ ಉಳಿದಿತ್ತು. ಇದರಿಂದಾಗಿ ರೈಲ್ವೆ ಗೇಟ್ ಹಾಕಿದಾಗ ಹಾಗೂ ತೆಗೆದಾಗ ತೀವ್ರತರದ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು.
ಸಮಸ್ಯೆಯ ಗಂಭೀರತೆಯನ್ನು ಅರಿತ ಸಂಸದ ಕ್ಯಾ. ಬ್ರಿಜೇಶ್ ಚೌಟ ಇತ್ತೀಚೆಗೆ ಶಾಸಕ ವೇದವ್ಯಾಸ ಕಾಮತ್ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ರೈಲ್ವೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳಾದ ಜಿಎಂ ಹಾಗೂ ಪಾಲಕ್ಕಾಡ್ ವಿಭಾಗದ ಡಿಆರ್‌ಎಂ ಅವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ತಾಂತ್ರಿಕ ವರದಿಯನ್ನು ಸಲ್ಲಿಸುವಂತೆ ಪಾಲಿಕೆಗೆ ನಿರ್ದೇಶನ ನೀಡಿದ್ದರು. ಈ ಸತತ ಫಾಲೋ-ಅಪ್‌ನ ಫಲವಾಗಿ ಈಗ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ.
ರೈಲ್ವೆ ಗೇಟ್ ವ್ಯಾಪ್ತಿಯಲ್ಲಿರುವ ದ್ವಿಪಥ ರಸ್ತೆಯನ್ನು ಪಾಲಿಕೆಯ ರಸ್ತೆಗೆ ಸಮನಾಗಿ ನಾಲ್ಕು ಪಥಗಳಿಗೆ ವಿಸ್ತರಿಸಲಾಗುವುದು. ಸುರಕ್ಷತೆಯನ್ನು ಹೆಚ್ಚಿಸಲು ಅತ್ಯಾಧುನಿಕ 'ಡಬಲ್ ಬೂಮ್' ಸ್ವಯಂಚಾಲಿತ ಗೇಟ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಪ್ರಸ್ತುತ ಯೋಜನೆಯ ಅಂದಾಜು ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಮಾರ್ಚ್ ಅಂತ್ಯದೊಳಗೆ ಕಾಮಗಾರಿಗೆ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ.ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ನಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ದಟ್ಟಣೆಗೆ ಶಾಶ್ವತ ಪರಿಹಾರ ಒದಗಿಸುವುದು ನಮ್ಮ ಆದ್ಯತೆಯಾಗಿತ್ತು. ರೈಲ್ವೆ ಇಲಾಖೆಯ ಈ ಅನುಮೋದನೆಯಿಂದ ಭವಿಷ್ಯದಲ್ಲಿ ಸುಗಮ ಸಂಚಾರಕ್ಕೆ ಹಾದಿ ಸುಗಮವಾಗಲಿದೆ ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.