ಉಜಿರೆ : ಸಮೂಹ ಮಾಧ್ಯಮ ವೃತ್ತಿಪರರು ಭಾರತೀಯ ಸಂವಿಧಾನವನ್ನು ಸಮಗ್ರವಾಗಿ ಅರ್ಥೈಸಿಕೊಂಡರೆ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಸಂವಹನ ಪ್ರಕ್ರಿಯೆ ಅರ್ಥಪೂರ್ಣಗೊಳ್ಳುತ್ತದೆ. ಸಕಾರಾತ್ಮಕ ಅಭಿವ್ಯಕ್ತಿ ತೀಕ್ಷ್ಣಗೊಂಡು ಪ್ರಜಾಪ್ರಭುತ್ವದ ಮೌಲ್ಯಗಳು ಗೆಲ್ಲುತ್ತವೆ ಎಂದು ನ್ಯಾಯವಾದಿ, ಹಿರಿಯ ಪತ್ರಕರ್ತ ವೀರೇಂದ್ರ ಪಿ.ಎಂ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಗುರುವಾರ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ 'ಮಾಧ್ಯಮ ಕಾನೂನು ಮತ್ತು ನೀತಿಸಂಹಿತೆ' ಕುರಿತು ಅವರು ಮಾತನಾಡಿದರು.
ಭಾರತವು ಅನ್ವಯಿಸಿಕೊಂಡಿರುವ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ ಬಲಾಢ್ಯವಾದುದು. ರಾಷ್ಟçದ ಪರಿಕಲ್ಪನೆಗಿಂತ ಸ್ಟೇಟ್ ಎಂಬ ಪಾರಿಭಾಷಿಕ ಪದವು ಆಧುನಿಕ ಪ್ರಜಾಪ್ರಭುತ್ವದ ಸುಧಾರಣಾವಾದಿ ಆಲೋಚನಾಕ್ರಮಗಳಿಗೆ ಹೆಚ್ಚು ಹತ್ತಿರವಾದುದು. ಸ್ಟೇಟ್ ಅಥವಾ ರಾಜ್ಯಾಂಗವನ್ನು ಸುಧಾರಣಾವಾದಿ ನೆಲೆಯನ್ನಾಗಿ ಜನಪರ ಚಿಂತನೆಗೆ ಅನುಗುಣವಾಗಿ ಪರಿವರ್ತಿಸುವ ಶಕ್ತಿ ಸಂವಿಧಾನಕ್ಕಿದೆ. ಹೀಗಾಗಿ ವರದಿಗಾರರು, ಸಂಪಾದಕ ಹುದ್ದೆಯಲ್ಲಿರುವವರು, ಟೆಲಿವಿಷನ್, ಸಿನಿಮಾ ಮತ್ತು ನೂತನ ಸಮೂಹ ಮಾಧ್ಯಮ ವಲಯಗಳಲ್ಲಿ ಗುರುತಿಸಿಕೊಂಡು ವೃತ್ತಿನಿರತರಾದವರೆಲ್ಲರೂ ಸಂವಿಧಾ£ವನ್ನು ಆಳವಾಗಿ ತಿಳಿದುಕೊಳ್ಳಬೇಕು. ಆಗ ಮಾತ್ರ ಒಳಿತಿನ ಪರ ನಿಲ್ಲುವ ಖಚಿತತೆಯ ನಿಲುವುಗಳನ್ನು ತಳೆಯಲು ಅನುಕೂಲವಾಗುತ್ತದೆ. ಆ ಸ್ಪಷ್ಟತೆಯ ಆಧಾರದ ಮೇಲೆ ಸೃಜನಶೀಲ ಅಭಿವ್ಯಕ್ತಿಯ ಮಾದರಿಗಳನ್ನು ರೂಪಿಸಿ ಸಾಮಾಜಿಕ ಬದಲಾವಣೆಯ ಸಾಧ್ಯತೆಗಳನ್ನು ವಿಸ್ತರಿಸಬಹುದು ಎಂದರು.
ಸ್ಟೇಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಈ ಮೂರೂ ನೆಲೆಗಳಲ್ಲಿ ನ್ಯಾಯಾಂಗವೇ ಹೆಚ್ಚು ಪ್ರಾಧಾನ್ಯತೆ ಪಡೆದಿದೆ. ನ್ಯಾಯಾಲಯದ ತೀರ್ಪುಗಳು ಚಾಲ್ತಿಯಲ್ಲಿರುವ ಕಾನೂನುಗಳನ್ನು ಸಂವಿಧಾನಾತ್ಮಕವಾಗಿ ವಿಶ್ಲೇಷಿಸುತ್ತವಾದ್ದರಿಂದ ನ್ಯಾಯಾಂಗಕ್ಕೆ ವಿಶೇಷ ಆದ್ಯತೆ ಇದೆ. ಶಾಸಕಾಂಗವು ರೂಪಿಸುವ ನೀತಿಗಳು ಸಂವಿಧಾನಬದ್ಧವಾಗಿರದಿದ್ದರೆ ಅವುಗಳನ್ನು ಪರಾಮರ್ಶಿಸಿ ತಿದ್ದುವ ಕೆಲಸ ಈ ಬಗೆಯ ವಿಶ್ಲೇಷಣೆಯಿಂದ ಆಗುತ್ತದೆ. ನ್ಯಾಯಿಕ ತೀರ್ಪು ಮತ್ತು ವಿಶ್ಲೇಷಣೆಗಳು ಸಂವಿಧಾನದ ಪಾರಮ್ಯವನ್ನೇ ಎತ್ತಿಹಿಡಿಯುತ್ತವೆ. ಈ ಆಯಾಮವನ್ನು ದೃಷ್ಟಿಯಲ್ಲಿರಿಸಿಕೊಂಡೇ ನ್ಯಾಯಾಂಗ ಕಾರ್ಯನಿರತವಾಗಿರುತ್ತದೆ ಎಂದು ತಿಳಿಸಿದರು.
ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಥವಾ ಫೋರ್ಥ್ ಎಸ್ಟೇಟ್ ಎಂದು ಗುರುತಿಸಲಾಗುತ್ತದೆ. ಇದು ಲೋಕರೂಢಿಯ ಗ್ರಹಿಕೆಯೇ ಹೊರತು ಎಲ್ಲೂ ಅಧಿಕೃತವಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ನಂತರದ ನಾಲ್ಕನೇ ಅಂಗ ಎಂಬುದಾಗಿ ಗುರುತಿಸಲ್ಪಟ್ಟಿಲ್ಲ. ಮೊದಲ ಮೂರೂ ಪ್ರಜಾಪ್ರಭುತ್ವದ ನೆಲೆಗಳನ್ನು ಸುಸ್ಥಿತಿಯಲ್ಲಿರುವಂತೆ ನಿಗಾವಹಿಸುವ ಕ್ಷೇತ್ರವನ್ನಾಗಿ ಮಾಧ್ಯಮವನ್ನು ಪರಿಗಣಿಸುವ ಪರಿಪಾಠ ಮುಂದುವರೆದು 'ನಾಲ್ಕನೇ ಅಂಗ' ಎಂದು ಗ್ರಹಿಸುವುದು ರೂಢಿಯಾಗಿದೆ. ಇಂತಹ ಲೋಕರೂಢಿಯ ಗ್ರಹಿಕೆಯು ಮಾಧ್ಯಮ ವೃತ್ತಿಪರರನ್ನು ಹೆಚ್ಚು ಜವಾಬ್ದಾರಿಯುತ ಆಗಿಸುವುದಕ್ಕೆ ನೆರವಾಗಿದೆ. ಈ ದೃಷ್ಟಿಯಿಂದ ಮಾಧ್ಯಮ ವೃತ್ತಿಪರತೆಯೊಂದಿಗೆ ಗುರುತಿಸಿಕೊಂಡ ಹೊಸ ಪೀಳಿಗೆ ಸಂವಿಧಾನವನ್ನು ಸಮಗ್ರವಾಗಿ ತಿಳಿದುಕೊಂಡು ಎಚ್ಚರದ ಹೊಣೆಗಾರಿಕೆ ನಿಭಾಯಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೆಲ್ಲಿಸಬೇಕು ಎಂದು ನುಡಿದರು.
ನ್ಯಾಯಾಂಗ ಮತ್ತು ಮಾಧ್ಯಮ ರಂಗ ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯಗಳನ್ನು ನಿರ್ವಹಿಸಿದಾಗ ಜನಪರ ಕಾನೂನುಗಳು ರೂಪುಗೊಳ್ಳುವುದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಕಾನೂನು ನಿರೂಪಕರೇ ಜನವಿರೋಧಿ ನೀತಿಗಳನ್ನು ರೂಪಿಸಲು ಪ್ರಯತ್ನಿಸಿದರೆ ನ್ಯಾಯಾಂಗ ಛಾಟಿ ಬೀಸುತ್ತದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಂಗದ ವಿವೇಚನಾತ್ಮಕ ನಿಲುವುಗಳು ಸಂವಿಧಾನದ ಸದಾಶಯಗಳನ್ನು ಬದುಕಿಸುತ್ತವೆ. ಮಾಧ್ಯಮಗಳವರು ಅವುಗಳಿಗೆ ಕನ್ನಡಿ ಹಿಡಿದು ಸಕಾರಾತ್ಮಕ ಹೆಜ್ಜೆಗಳಿಗೆ ಕಸುವು ತುಂಬಿಕೊಡುವ ವೃತ್ತಿಪರತೆಯನ್ನು ಮೆರೆಯಬೇಕು. ಹಾಗಾದಾಗ ಮಾತ್ರ ಅಭಿವ್ಯಕ್ತಿಗೆ ತೀಕ್ಷ್ಣತೆ ಮತ್ತು ತೀವ್ರತೆ ದಕ್ಕಿ ಜನಸಮೂಹಕ್ಕೆ ಅನುಕೂಲವಾಗುತ್ತದೆ ಎಂದರು. ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾಧ್ಯಮ ಕಾನೂನುಗಳು ಮತ್ತು ನೀತಿ ಸಂಹಿತೆ ಸಂಬAಧಿತ ಸಂವಾದಗಳು ಅಧ್ಯಯನನಿರತ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಎಂದರು. ವಸುಧಾ ಕಾರ್ಯಕ್ರಮ ನಿರೂಪಿಸಿದರು. ವೀರೇಂದ್ರ ಪಿ.ಎಂ ಅವರನ್ನು ಗ್ರೀಷ್ಮಾ ಪರಿಚಯಿಸಿದರು. ಪ್ರಜ್ಞಾ ವಂದಿಸಿದರು.