ಮಂಗಳೂರು: ಸಹಕಾರಿ ಕ್ಷೇತ್ರದ ಬಲವರ್ಧನೆಗೆ ತನ್ನದೇ ಆದ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಬ್ಯಾಂಕಿನ ಬೆಳವಣಿಗೆಯಲ್ಲಿ ಪ್ರಾಮಾಣಿಕ ರೀತಿಯ ಸಾರ್ಥಕತೆಯನ್ನು ಕಂಡ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿದವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿ ಸಹಕಾರಿ ನಾಯಕರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಗುರುತಿಸಿಕೊಂಡಿರುವ 'ಸಹಕಾರ ರತ್ನ' ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ನಡೆಸಲು ಅವಿಭಜಿತ ಜಿಲ್ಲೆಯ ಸಮಸ್ತ ಸಹಕಾರಿಗಳೆಲ್ಲರೂ ತೀರ್ಮಾನಿಸಿದ್ದೇವೆ ಎಂದು 'ಸಹಕಾರ ರತ್ನ' ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು. ಅವರು ನಗರದ ಎಸ್ ಸಿಡಿಸಿಸಿ ಬ್ಯಾಂಕ್ ನ ಪ್ರದಾನ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಫೆಬ್ರವರಿ-24 ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ ಹುಟ್ಟುಹಬ್ಬದ ದಿನವಾಗಿದ್ದು, ದಿನ ಬೆಳಿಗ್ಗೆ 10.30 ಗಂಟೆಗೆ ಎಸ್ ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಅಭಿವಂದನಾ ಕಾರ್ಯಕ್ರಮ ಹಾಗೂ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಸಮಾರಂಭ ನಡೆಯಲಿದೆ ಎಂದರು.
ಸಹಕಾರ ಕ್ಷೇತ್ರವನ್ನು ಸದೃಢಗೊಳಿಸುವ ಚಿಂತನೆಯೊಂದಿಗೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿರುವ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಸಹಕಾರಿಗಳೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಸಹಕಾರ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಕಾರ್ಯಯೋಜನೆಯನ್ನು ಆಯೋಜಿಸಿ, ನಮಗೆಲ್ಲರಿಗೂ ಮಾರ್ಗದರ್ಶಕರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ 77 ಮಂದಿ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮವು ಈ ಸಂದರ್ಭದಲ್ಲಿ ಆಯೋಜನೆಯಾಗಿದೆ. ಸಹಕಾರ ಕ್ಷೇತ್ರವು ಸರ್ವಧರ್ಮೀಯರ ಕ್ಷೇತ್ರವಾಗಿರುವುದರಿಂದ ಸಮಾಜದ ಎಲ್ಲಾ ವರ್ಗದ ಫಲಾನುಭವಿಗಳನ್ನು ಗುರುತಿಸಿ, ಸವಲತ್ತುಗಳನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.
ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ ಹುಟ್ಟುಹಬ್ಬದ ಅರ್ಥಪೂರ್ಣ ಕಾರ್ಯಕ್ರಮವು ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು. ಟಿ. ಖಾದರ್ ಫರೀದ್ ಅವರಿಂದ ಉದ್ಘಾಟನೆಗೊಳ್ಳಲಿದೆ.
ಸಮಸ್ತ ಸಹಕಾರಿಗಳ ಪರವಾಗಿ ಈ ಕಾರ್ಯಕ್ರಮದಲ್ಲಿ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಅಭಿವಂದನೆಯನ್ನು ಸ್ವೀಕರಿಸಲಿದ್ದು, ಕರ್ನಾಟಕ ಸರ್ಕಾರದ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಡಾ| ಎಂ. ವೀರಪ್ಪ ಮೊಯಿಲಿ ಅವರು ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅಭಿವಂದಿಸಿ. ಅಭಿವಂದನಾ ಭಾಷಣ ಮಾಡಲಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಇವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟು, ವಿನಯ್ ಕುಮಾರ್ ಸೂರಿಂಜೆ, ಸದಾಶಿವ ಉಳ್ಳಾಲ್, ಎಸ್ ಬಿ ಜಯರಾಮ ರೈ, ಎಕ್ಕಾರ್ ಮೋನಪ್ಪ ಶೆಟ್ಟಿ, ವಾದಿರಾಜ್, ಗೋಪಾಲಕೃಷ್ಣ ಭಟ್, ಭಾಸ್ಕರ್ ಕೋಟ್ಯಾನ್ ಉಪಸ್ಥಿತರಿದ್ದರು.