image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆದಿಉಡುಪಿ ಎಪಿಎಂಸಿಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ: ಉಡುಪಿ ನಗರಸಭೆ ಅಧಿಕಾರಿಗಳ ದಾಳಿಯಲ್ಲಿ 12 ಟನ್ ಬೆಳ್ಳುಳ್ಳಿ ವಶ

ಆದಿಉಡುಪಿ ಎಪಿಎಂಸಿಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ: ಉಡುಪಿ ನಗರಸಭೆ ಅಧಿಕಾರಿಗಳ ದಾಳಿಯಲ್ಲಿ 12 ಟನ್ ಬೆಳ್ಳುಳ್ಳಿ ವಶ

ಉಡುಪಿ: ನಗರದ ಆದಿಉಡುಪಿ ಎಪಿಎಂಸಿ. ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಚೀನಾ ಬೆಳ್ಳುಳ್ಳಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನಂತೆ ಉಡುಪಿ ನಗರಸಭಾ ಪೌರಾಯುಕ್ತ ರಾಯಪ್ಪ ನೇತೃತ್ವದ ತಂಡ ಆದಿ ಉಡುಪಿ ಎಪಿಎಂಸಿ ಮಾರುಕಟ್ಟೆಗೆ ಆಗಮಿಸಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಎಪಿಎಂಸಿ ಅಧಿಕಾರಿಗಳು ಕೂಡ ಹಾಜರಿದ್ದರು. ಬಳಿಕ ವ್ಯಾಪಾರಸ್ಥರಿಂದ ಮಾಹಿತಿ ಪಡೆದು, ಮಾರಾಟಕ್ಕೆ ತಂದಿದ್ದ ರಾಸಾಯನಿಕ ಮಿಶ್ರಿತ ಚೀನಾ ಬೆಳ್ಳುಳ್ಳಿ ಎಂಬ ಶಂಕೆಯ ಮೇರೆಗೆ ಸುಮಾರು 12 ಟನ್ ಬೆಳ್ಳುಳ್ಳಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

'ಎಪಿಎಂಸಿ ಮಾರುಕಟ್ಟೆಗೆ ಚೀನಾದ ಬೆಳ್ಳುಳ್ಳಿ ಬಂದಿದೆ ಎಂಬ ಮಾಹಿತಿ ಬಂದ ಕೂಡಲೇ ಆಗಮಿಸಿ ಪರಿಶೀಲನೆ ಮಾಡಿದ್ದೇವೆ. ಇಲ್ಲಿಗೆ ಬಂದ ಎಲ್ಲ ಬೆಳ್ಳುಳ್ಳಿಗಳನ್ನು ವಶಪಡಿಸಿಕೊಂಡು, ಅದರ ಮಾದರಿಯನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿನ ವರದಿಯಂತೆ ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.

ಉಡುಪಿ ನಗರಸಭೆ ವ್ಯಾಪ್ತಿಯ ಮಾರುಕಟ್ಟೆ ಎಪಿಎಂಸಿಯಲ್ಲಿ ಯಾವುದೇ ಕಾರಣಕ್ಕೂ ಇಂತಹ ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥ, ತರಕಾರಿ, ಬೆಳ್ಳುಳ್ಳಿ ಮಾರಾಟ ಮಾಡಲು ಅವಕಾಶ ನೀಡಲ್ಲ. ಅಂತಹ ತರಕಾರಿಗಳನ್ನು ಮಾರಾಟ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು. ಅಲ್ಲದೆ ಅವುಗಳ ಬಗ್ಗೆ ನಿಗಾ ಇಡಲು ಸಿಬ್ಬಂದಿಗಳನ್ನು ಕೂಡ ನೇಮಿಸಲಾಗುವುದು ಎಂದು ಅವರು ತಿಳಿಸಿದರು.

Category
ಕರಾವಳಿ ತರಂಗಿಣಿ