ಮಂಗಳೂರು: ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಹಾಗೂ ಅತ್ತಾವರದ ಕೆಎಂಸಿ ಆಸ್ಪತ್ರೆಯ ಮಕ್ಕಳ ವಿಭಾಗದ ಸಹಯೋಗದಲ್ಲಿ "ಪರಿಣಾಮದ ಪ್ರದರ್ಶನ: ಸವಾಲಿನಿಂದ ಬದಲಾವಣೆಯತ್ತ" ಧ್ಯೇಯದೊಂದಿಗೆ ಅಂತಾರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನಾಚರಣೆಯನ್ನು ಮಂಗಳವಾರ ಅತ್ತಾವರ ಕೆ ಎಂಸಿ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಎಂಸಿ ಮಂಗಳೂರಿನ ಡೀನ್ ಡಾ| ಬಿ. ಉಣ್ಣಿಕೃಷ್ಣನ್ ಅವರು ಮಕ್ಕಳ ಕ್ಯಾನ್ಸರ್ ನ ಲಕ್ಷಣಗಳ ಬಗ್ಗೆ ಪೋಷಕರು ಎಚ್ಚರವಹಿಸಬೇಕು. ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದಲ್ಲಿ ಮಕ್ಕಳ ಕ್ಯಾನ್ಸರ್ ತ್ವರಿತವಾಗಿ ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ.
ಮಕ್ಕಳಲ್ಲಿ ರಕ್ತದ ಕ್ಯಾನ್ಸರ್(ಲುಕೇಮಿಯಾ) ಅಧಿಕವಾಗಿ ಕಂಡುಬರುತ್ತಿದೆ. ಪೋಷಕರು ಹಾಗೂ ಸಮಾಜದಲ್ಲಿ ಈ ಕುರಿತ ಜಾಗೃತಿಯ ಕೊರತೆ ಇದೆ. ಈ ಬಗ್ಗೆ ಪೋಷಕರು ಜಾಗೃತರಾಗಬೇಕು. ಮಕ್ಕಳ ಕ್ಯಾನ್ಸರ್ ವಿರುದ್ಧ ಕೆ ಎಂಸಿ ಆಸ್ಪತ್ರೆ ಸಮರ ನಡೆಸುತ್ತಿದ್ದು, ಶೇ. 80ರಷ್ಟು ಮಕ್ಕಳು ಸಂಪೂರ್ಣ ಗುಣಮುಖರಾಗಿದ್ದಾರೆ. ಉಚಿತ ಚಿಕಿತ್ಸೆ ಒದಗಿಸಲು ಅನೇಕ ದಾನಿಗಳು ಮುಂದಾಗುತ್ತಿದ್ದು, ಅವರ ನೆರವಿನಿಂದ ಮಕ್ಕಳ ಜೀವನದಲ್ಲಿ ಹೊಸ ಅಧ್ಯಯ ಆರಂಭವಾಗುತ್ತಿದೆ ಎಂದರು.
ಡಾ| ಹರ್ಷ ಪ್ರಸಾದ್ ಎಲ್. ಮಾತನಾಡಿ, ಹೆಚ್ಚಿನ ಬಾಲ್ಯದ ಕ್ಯಾನ್ಸರ್ ಗುಣಪಡಿಸಬಹುದಾಗಿದೆ. ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಗುಣಪಡಿಸುವ ಪ್ರಮಾಣ ಶೇ. 60–70 ರಷ್ಟಿದ್ದರೆ, ಹಿಂದುಳಿದ ರಾಷ್ಟ್ರಗಳಲ್ಲಿ ಇದು ಶೇ. 30 ರಷ್ಟಿದೆ. ಕ್ಯಾನ್ಸರ್ ಕುಟುಂಬಗಳ ಮೇಲೆ ಮಾನಸಿಕ ಮತ್ತು ಆರ್ಥಿಕ ಒತ್ತಡವನ್ನು ಹೇರುತ್ತದೆ. ಇದರ ವಿರುದ್ಧದ ಹೋರಾಟಕ್ಕೆ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ನಿರಂತರ ಬೆಂಬಲವಾಗಿದೆ ಎಂದರು.
ಮಿಮಿಕ್ರಿಯೊಂದಿಗೆ ನಟ ವಿಸ್ಮಯ್ ವಿನಾಯಕ್ ಅವರು ಮಕ್ಕಳಿಗೆ ಮನೋರಂಜನೆ ನೀಡಿದರು.
ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧಕಿ ರೆಮೊನಾ ಇವೆಟ್ಟಾ ಪಿರೇರಾ, ಮಾಹೆ ಶಿಕ್ಷಣ ಆಸ್ಪತ್ರೆಯ ಡಾ| ಸುಧಾಕರ್ ಕಂತಿಪುಡಿ, ಡಾ| ದೀಪಕ್ ಮಾಟಿ ಮತ್ತಿತರರು ಉಪಸ್ಥಿತರಿದ್ದರು.
ಲ್ಯಾಂಡ್ ಟ್ರೇಡ್ಸ್ ನ ಮುಖ್ಯ ಹಣಕಾಸು ಅಧಿಕಾರಿ ಶಮೀಳಾ ಅವರು ವಿದ್ಯಾರ್ಥಿಗಳಿಗೆ 'ಹೋಪ್' ಸ್ಕಾಲರ್ ಶಿಪ್ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳ ಚಿಕಿತ್ಸೆಗೆ ವಿವಿಧ ದಾನಿಗಳು ನೆರವು ವಿತರಿಸಿದರು.
ಕನ್ಸಲ್ವೆಂಟ್ ಪೀಡಿಯಾಟ್ರಿಕ್ ಹೆಮೆಟಾಲಜಿಸ್ಟ್ ಡಾ| ಹರ್ಷಪ್ರಸಾದ್ ಎಲ್. ಸ್ವಾಗತಿಸಿದರು. ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ| ಸುಚೇತಾ ರಾವ್ ವಂದಿಸಿದರು.
'ವಿದ್ಯಾ ಸಂಕಲ್ಪ' ಲೋಕಾರ್ಪಣೆ:
ಲ್ಯಾಂಡ್ ಟ್ರೇಡ್ಸ್ ನ ಸಾಮಾಜಿಕ ಜವಾಬ್ದಾರಿ ನಿಧಿಯ ಭಾಗವಾಗಿ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ನೆರವಾಗಲು ಹೋಪ್ ಸ್ಕಾಲರ್ ಶಿಪ್ ವಿತರಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಯೋಜನೆ ವಿಸ್ತರಿಸುವ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ವಿದ್ಯಾ ಸಂಕಲ್ಪ ವೆಬ್ ಸೈಟ್ ಬಿಡುಗಡೆಗೊಳಿಸಲಾಯಿತು. ದ.ಕ. ಜಿಲ್ಲೆಯ ಯಾವುದೇ ಕ್ಯಾನ್ಸರ್ ಪೀಡಿತ ಮಕ್ಕಳು 'ವಿದ್ಯಾ ಸಂಕಲ್ಪ' ದ ಹೊಸ ವೆಬ್‌ಸೈಟ್ (vidyasankalp.org) ಮೂಲಕ ಅರ್ಜಿ ಸಲ್ಲಿಸಬಹುದು. ವುಗಳನ್ನು ಪರಿಶೀಲನೆ ನಡೆಸಿ ಅಗತ್ಯ ನೆರವನ್ನು ವಿತರಿಸಲಾಗುವುದು. ಹಿಂದಿನ ಸಾಲಿನಲ್ಲಿ ಹೋಪ್ ಸ್ಕಾಲರ್ ಶಿಪ್ ಮೂಲಕ 40 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಪ್ರಸಕ್ತ 118 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಇದರೊಂದಿಗೆ ಬದನಾಜೆ ಸರಕಾರಿ ಶಾಲೆಯಲ್ಲಿ ಡಿಜಿಟಲ್ ಕ್ಲಾಸ್ ರೂಂ ಹಾಗೂ ಪಾಣಾಜೆ ಶಾಲೆಗೆ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿಕೊಡಲಾಗಿದ್ದು, ಸುಮಾರು 30 ಲಕ್ಷಕ್ಕೂ ಅಧಿಕ ಮೊತ್ತ ವಿನಿಯೋಗಿಸಲಾಗಿದೆ ಎಂದು ಲ್ಯಾಂಡ್ ಟ್ರೇಡ್ಸ್ ನ ವ್ಯವಸ್ಥಾಪಕ ನಿರ್ದೇಶಕ ಕೆ. ಶ್ರೀನಾಥ್ ಹೆಬ್ಬಾರ್ ತಿಳಿಸಿದ್ದಾರೆ.