image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ – 10 ದಿನಗಳ ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ

ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ – 10 ದಿನಗಳ ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ

ಉಜಿರೆ : ಉಜಿರೆಯ ಸಿದ್ಧವನದಲ್ಲಿರುವ ರುಡ್ ಸೆಟ್ ಸಂಸ್ಥೆಯಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ (PMEGP) ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ 10 ದಿನಗಳ ಕಾಲ ಸಮಗ್ರವಾಗಿ ನೀಡಲಾದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನೆರವೇರಿತು. ಗ್ರಾಮೀಣ ಯುವಕರು ಮತ್ತು ಮಹಿಳೆಯರಲ್ಲಿ ಸ್ವ ಉದ್ಯೋಗ ಮನೋಭಾವ ಬೆಳೆಸಿ, ಉದ್ಯಮ ಆರಂಭಿಸಲು ಅಗತ್ಯವಾದ ಜ್ಞಾನ, ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ರೂಪಿಸುವ ಉದ್ದೇಶದಿಂದ ಈ ತರಬೇತಿಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ *ಕೆ. ಹರೀಶ್ ಕುಮಾರ್*, ಅಧ್ಯಕ್ಷರು, ಮೆಸ್ಕಾಂ, ಮಂಗಳೂರು, ಅವರು ಮಾತನಾಡಿ “ಉದ್ಯಮ ಆರಂಭಿಸಲು ದೊಡ್ಡ ಬಂಡವಾಳಕ್ಕಿಂತ ದೊಡ್ಡ ಮನಸ್ಸು ಮತ್ತು ದೃಢ ಸಂಕಲ್ಪ ಮುಖ್ಯ. ಪರಿಶ್ರಮ, ಶಿಸ್ತಿನ ಜೀವನ ಹಾಗೂ ನವೀನ ಆಲೋಚನೆಗಳಿಂದ ಪ್ರತಿಯೊಬ್ಬರೂ ಯಶಸ್ವಿ ಉದ್ಯಮಿಗಳಾಗಬಹುದು” ಎಂದು ತಿಳಿಸಿದರು. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಗ್ರಾಮೀಣ ಭಾಗದಲ್ಲೇ ಉದ್ಯೋಗ ಸೃಷ್ಟಿಸಿ ಸಮಾಜದ ಆರ್ಥಿಕ ಪ್ರಗತಿಗೆ ಕೈಜೋಡಿಸಬೇಕು ಎಂದು ಅವರು ಸಲಹೆ ನೀಡಿದರು. ನಂತರ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಜಯಕುಮಾರ್ ಬಿ.ಪಿ, ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರು ವಹಿಸಿ ಮಾತನಾಡಿ, “ಉದ್ಯಮಶೀಲತೆ ಗ್ರಾಮೀಣ ಅಭಿವೃದ್ಧಿಗೆ ಬಲವಾದ ಅಸ್ತ್ರ. ತರಬೇತಿಯಲ್ಲಿ ಪಡೆದ ಜ್ಞಾನವನ್ನು ಕಾರ್ಯರೂಪಕ್ಕೆ ತಂದು ಆತ್ಮನಿರ್ಭರರಾಗಬೇಕು” ಎಂದು ಹೇಳಿದರು. ರುಡ್ ಸೆಟ್ ಸಂಸ್ಥೆ ನಿರುದ್ಯೋಗಿಗಳಿಗೆ ಉದ್ಯೋಗಮುಖಿ ತರಬೇತಿ ನೀಡಿ ಸಾವಿರಾರು ಕುಟುಂಬಗಳ ಬದುಕು ರೂಪಿಸಿರುವುದಾಗಿ ತಿಳಿಸಿದರು.

ಉಜಿರೆ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಅವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ, ಭವಿಷ್ಯದಲ್ಲಿ ಯಶಸ್ವಿ ಉದ್ಯಮಿಗಳಾಗಿ ಬೆಳೆವಂತೆ ಶುಭ ಹಾರೈಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಅವರು ಧನ್ಯವಾದ ಅರ್ಪಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ಅವರು ನಿರೂಪಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾಶ್ರೀ*ಅವರು ಪ್ರಾರ್ಥನೆ ನೆರವೇರಿಸಿದರು. ಬಳಿಕ ಗ್ರಾಯತ್ರಿ, ಗೌತಮ್, ಶೋಭಾ ಹಾಗೂ ನಿತಿನ್ ಅವರು ತಮ್ಮ ತರಬೇತಿಯ ಅನುಭವಗಳನ್ನು ಹಂಚಿಕೊಂಡರು. “ಈ ತರಬೇತಿ ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿ, ಉದ್ಯಮ ಆರಂಭಿಸಲು ಸ್ಪಷ್ಟ ಮಾರ್ಗದರ್ಶನ ನೀಡಿದೆ” ಎಂದು ಅವರು ಹೇಳಿದರು.

10 ದಿನಗಳ ತರಬೇತಿಯಲ್ಲಿ ವ್ಯವಹಾರ ಯೋಜನೆ ತಯಾರಿ, ಬ್ಯಾಂಕ್ ಸಾಲ ಪ್ರಕ್ರಿಯೆ, ಮಾರುಕಟ್ಟೆ ವ್ಯವಸ್ಥೆ, ಲಾಭ-ನಷ್ಟ ಲೆಕ್ಕಾಚಾರ, ಸಂವಹನ ಕೌಶಲ್ಯ, ನಾಯಕತ್ವ ಗುಣಗಳು ಹಾಗೂ ಡಿಜಿಟಲ್ ಉಪಯೋಗಗಳ ಕುರಿತು ಪ್ರಾಯೋಗಿಕ ಮತ್ತು ತಾತ್ವಿಕವಾಗಿ ತರಬೇತಿ ನೀಡಲಾಯಿತು. ಈ ತರಬೇತಿಯ ಮೂಲಕ ಶಿಭಿರಾರ್ಥಿಗಳಲ್ಲಿ ಸ್ವ ಉದ್ಯೋಗದ ಬಗ್ಗೆ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸ ಮೂಡಿದುದು ಗಮನಾರ್ಹವಾಗಿದೆ. ಈ ಸಮಾರೋಪ ಸಮಾರಂಭವು ಭಾಗವಹಿಸಿದ ಎಲ್ಲರಲ್ಲೂ ಉದ್ಯಮಶೀಲತಾ ಉತ್ಸಾಹ ಹೆಚ್ಚಿಸಿ, ಭವಿಷ್ಯದ ಯಶಸ್ಸಿಗೆ ಪ್ರೇರಣೆ ನೀಡಿದಂತಾಯಿತು.

Category
ಕರಾವಳಿ ತರಂಗಿಣಿ