ಬಂಟ್ವಾಳ : ಕುಕ್ಕಿಪಾಡಿ ಗ್ರಾಮದ ಕೆಂತಲೆ ಎಂಬಲ್ಲಿನ ಗುಡ್ಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗಿಡ -ಮರಗಳು ಸುಟ್ಟು ಭಸ್ಮವಾಗಿದೆ. ಸ್ಥಳೀಯರೊಬ್ಬರಿಗೆ ಸೇರಿದ ಜಾಗದಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಘಟನಾ ಸ್ಥಳದಿಂದ ದಟ್ಟವಾದ ಹೊಗೆ ಆವರಿಸಿತ್ತು. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬಂಟ್ವಾಳ, ಮೂಡುಬಿದಿರೆ ಮತ್ತು ಬೆಳ್ತಂಗಡಿ ಅಗ್ನಿಶಾಮಕ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಆದರೆ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವುದು ತಡವಾದ ಕಾರಣ, ಸ್ಥಳೀಯ ನಿವಾಸಿಗಳೇ ನೀರು ಹಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಸುಮಾರು ಒಂದೂವರೆ ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು, ಕಾಡಿನ ಗಿಡ-ಮರಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅಷ್ಟೇ ಅಲ್ಲದೆ, ಬೆಂಕಿಯ ಕೆನ್ನಾಲಿಗೆಗೆ ಹಲವಾರು ಅಡಿಕೆ ಸಸಿಗಳು ಕೂಡ ನಾಶವಾಗಿವೆ ಎಂದು ಭೂಮಾಲೀಕರು ತಿಳಿಸಿದ್ದಾರೆ.