ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯಲ್ಲಿ ಕಳೆದ 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನ ತಂಡದ ಸದಸ್ಯೆ ಜೂಲಿ ನಿವೃತ್ತಿಯಾಗಿದ್ದಾಳೆ. ಅಂತೆಯೇ ಜೂಲಿಗೆ ಮಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಸಿಐಎಸ್ಎಫ್ನ ಏರ್ಪೋರ್ಟ್ ಸೆಕ್ಯುರಿಟಿ ಗ್ರೂಪ್ನ ಕೆ9 ಸ್ಕ್ವಾಡ್ ಸದಸ್ಯೆ ಲ್ಯಾಬ್ರಡಾರ್ ಶ್ವಾನ ಇಲ್ಲಿನ ವಿಮಾನ ನಿಲ್ದಾಣದ ಭದ್ರತಾ ತಂಡದಲ್ಲಿದ್ದಳು. ಇದೀಗ ನಿವೃತ್ತಿಯಾಗಿದ್ದಾಳೆ. ಇದೇ ವೇಳೆ, ಜೂಲಿ ಸ್ಥಾನ ತುಂಬಲಿರುವ 11 ತಿಂಗಳ ಲ್ಯಾಬ್ರಡಾರ್ ನಾಯಿ ಮರಿ ರಿಯೊವನ್ನು ಕೆ9 ತಂಡಕ್ಕೆ ಸ್ವಾಗತಿಸಲಾಯಿತು.
ಹಿರಿಯ ಕಮಾಂಡೆಂಟ್ ಮತ್ತು ಮುಖ್ಯ ಏರೋಡ್ರೋಮ್ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ ಮತ್ತು ಸಿಐಎಸ್ಎಫ್ನ ಇತರ ಅಧಿಕಾರಿಗಳು ಜೂಲಿಯ ಅಚಲ ಸಮರ್ಪಣೆ ಮತ್ತು ನಿಷ್ಠೆ ಕೊಂಡಾಡಿದರು. ರಿಯೋ ನಾಯಿಮರಿಯನ್ನು ಔಪಚಾರಿಕವಾಗಿ ತಂಡಕ್ಕೆ ಸ್ವಾಗತಿಸಲು ಜೋಶಿ ಅವರು ತಮ್ಮ ಹ್ಯಾಂಡ್ಲರ್ ದಲ್ಬೀರ್ ಸಿಂಗ್ ಅವರ ಸಮ್ಮುಖದಲ್ಲಿ ರಿಯೊ ಅವರ ಕಾಲರ್ಗೆ ಹೊಸ ಹಗ್ಗವನ್ನು ಅಂಟಿಸಿದರು. ರಿಯೊ ಈಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸುವ 4 ಸದಸ್ಯರ ಕೆ 9 ಸ್ಕ್ವಾಡ್ನ ಭಾಗವಾಗಿದ್ದಾರೆ.
8 ವರ್ಷಗಳ ಹಿಂದೆ ಕೆ 9 ಸ್ಕ್ವಾಡ್ಗೆ ಜೂಲಿ ಸೇರಿದ್ದಳು. ಅಂದಿನಿಂದ ವಿಮಾನ ನಿಲ್ದಾಣದಲ್ಲಿ ಹಲವಾರು ಭದ್ರತಾ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಳೆ. ಪತ್ತೆ ಮತ್ತು ಗಸ್ತು ಕರ್ತವ್ಯಗಳಲ್ಲಿ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾಳೆ. ಜೂಲಿ ಕೊಡುಗೆಗಳು ಅಮೂಲ್ಯವಾಗಿವೆ' ಎಂದು ವಿಮಾನ ನಿಲ್ದಾಣದ ಭದ್ರತಾ ಪಡೆ ಶ್ಲಾಘಿಸಿದೆ.
ಹೂಗಳಿಂದ ಅಲಂಕೃತವಾದ ಟ್ರಾಲಿಯಲ್ಲಿ ಜೂಲಿಯನ್ನು ಬೀಳ್ಕೊಟ್ಟು ಗೌರವಿಸಲಾಯಿತು. ಭದ್ರತಾ ಸೇವೆಯಿಂದ ನಿವೃತ್ತಿಯಾದ ಜೂಲಿಯನ್ನು ಹ್ಯಾಂಡ್ಲರ್ ಕುಮಾರ ಅವರು ದತ್ತು ಪಡೆದಿದ್ದಾರೆ. ಕುಮಾರ ಅವರ ಆರೈಕೆಯಲ್ಲಿ ಜೂಲಿ ತನ್ನ ನಿವೃತ್ತಿ ಜೀವನವನ್ನು ಕಳೆಯಲಿದ್ದಾಳೆ.