ಮಂಗಳೂರು: ಕಾರ್ಮಿಕರ ಹಿತ ಕಾಯುತ್ತಿದ್ದ 29 ಪ್ರಮುಖ ಕಾನೂನುಗಳನ್ನು ರದ್ದುಗೊಳಿಸಿ, ಕಾರ್ಪೊರೇಟ್ ಪರವಾಗಿ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ರೈತರ ಹಾಗೂ ಕಾರ್ಮಿಕರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ ಬಂದ್ ಗೆ ನಗರದಲ್ಲೂ ಬೆಂಬಲ ವ್ಯಕ್ತವಾಯಿತು. ನಗರದ ಕ್ಲಾಕ್ ಟವರ್ ಬಳಿ ವಾಹನ ಸಂಚಾರ ತಡೆದು ಪ್ರತಿಭಟಿಸಲಾಯಿತು. ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಕಾರರು ಕಾರ್ಮಿಕರ ಶೋಷಣೆಗೆ ಕಾರಣವಾಗುವ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, 'ಒಳ್ಳೆಯ ದಿನಗಳು ತರುವುದಾಗಿ ಜನತೆಗೆ ವಾಗ್ದಾನ ಮಾಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 12 ವರ್ಷಗಳಲ್ಲಿ ದೇಶದ ಸಂಪತ್ತನ್ನು ದೋಚಿ, ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಕೇಂದ್ರದ ನೀತಿಗಳೆಲ್ಲವೂ ಕಾರ್ಪೊರೇಟ್ ಪರವಾಗಿವೆಯೇ ಹೊರತು ಕಾರ್ಮಿಕರ ಹಿತ ಕಾಯುವುದಕ್ಕೆ ಪೂರಕವಾಗಿಲ್ಲ' ಎಂದು ಆರೋಪಿಸಿದರು. 'ಕಾರ್ಮಿಕ ಹಿತ ಕಾಯುತ್ತಿದ್ದ ಕಾನೂನುಗಳನ್ನೇ ರದ್ದುಪಡಿಸಿ, ಬಂಡವಾಳಶಾಹಿಗಳ ಪರವಾಗಿ ಕೇಂದ್ರ ಸರ್ಕಾರ ರೂಪಿಸಿರುವ ಸಂಹಿತೆಗಳು ಕಾರ್ಪೊರೇಟ್ ಸಂಹಿತೆಗಳೇ ಹೊರತು ಕಾರ್ಮಿಕ ಸಂಹಿತೆಗಳಲ್ಲ. ಕಾರ್ಮಿಕರ ಬದುಕಿಗೆ ಇವು ಯಾವುದೇ ರಕ್ಷಣೆ ನೀಡಲಾರವು' ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕ್ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ, 'ದೇಶದ ಅರ್ಥ ವ್ಯವಸ್ಥೆಗೆ ಭಾರೀ ಕೊಡುಗೆ ನೀಡಿದ ರಾಷ್ಟ್ರೀಕೃತ ಬ್ಯಾಂಕುಗಳನ್ ವಿಲೀನದ ಹೆಸರಿನಲ್ಲಿ ಅನೇಕ ಬ್ಯಾಂಕುಗಳು ಹೇಳ ಹೆಸರಿಲ್ಲದಂತಾದವು. ಈಗ ವಿಮೆ ವಲಯದಲ್ಲೂ ಶೇ 100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದು ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದೆ' ಎಂದರು. ಸಿಐಟಿಯು ಮುಖಂಡ ಯೋಗೀಶ್ ಜಪ್ಪಿನಮೊಗರು, ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಎಳೆಎಳೆಯಾಗಿ ವಿವರಿಸಿದರು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಫಣೀಂದ್ರ, ಎಐಟಿಯುಸಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ, ಬ್ಯಾಂಕ್ ನೌಕರರ ಮುಖಂಡರಾದ ಬಿ.ಎಂ.ಮಾಧವ, ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್ ಮಾತನಾಡಿದರು.