image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್.ಡಿ.ಎಂ ಕಾಲೇಜು ಉಜಿರೆಯಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

ಎಸ್.ಡಿ.ಎಂ ಕಾಲೇಜು ಉಜಿರೆಯಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

ಉಜಿರೆ  : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ಹಾಗು ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಸಹಭಾಗಿತ್ವ ಸೇರಿದಂತೆ ನವದೆಹಲಿಯ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ (ICSSR) ಪ್ರಾಯೋಜಕತ್ವದಲ್ಲಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಹಾಗು ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾರ್ಗದರ್ಶನದಲ್ಲಿ ಎರಡು ದಿನಗಳ 'ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆ: ಜಾಗತಿಕ ದೃಷ್ಟಿಕೋನ ವಿಚಾರ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಾಯಿತು. ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು, ವಿಶ್ವ ಸಂಸ್ಥೆ ಪ್ರಸ್ತಾಪ ಮಾಡಿರುವ 2030ರ ವೇಳೆಗೆ ಬಡತನ ನಿರ್ಮೂಲನೆ, ಪರಿಸರ ಸಂರಕ್ಷಣೆ ಮತ್ತು ಸಮೃದ್ಧಿಯನ್ನು ಸಾಧಿಸಲು 17 ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು (SDGs) ರೂಪಿಸಿದೆ. ಇದರಲ್ಲಿ ಪ್ರಮುಖವಾಗಿ 5 ತತ್ವಗಳಾದ ಸಮಾಜ, ಭೂಮಿ, ಪಾಲುದಾರಿಕೆ, ಸಮೃದ್ಧಿ ಮತ್ತು ಶಾಂತಿಯ ವಿಚಾರದಲ್ಲಿ ಅಭಿವೃದ್ಧಿ ಹೊಂದಲ್ಲು ತಿಳಿಹೇಳುತ್ತದೆ.

ಸಾಮಾಜಿಕ ಅಭಿವೃದ್ಧಿ ಎಂದರೆ ಅದು ಜನರ ಅಭಿವೃದ್ಧಿ. ಇದರಲ್ಲಿ ಬಡತನ ನಿರ್ಮೂಲನೆ, ಹಸಿವನ್ನು ನೀಗಿಸಿ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಹೆಚ್ಚಿಸುವುದು, ಆರೋಗ್ಯಕರ ಜೀವನ ಮತ್ತು ಯೋಗಕ್ಷೇಮ ಉತ್ತೇಜಿಸುವುದು, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ ಸಾಧಿಸುವುದರ ಜೊತೆಗೆ ಮಹಿಳೆಯರನ್ನು ಸಬಲಗೊಳಿಸುವುದು, ಶುದ್ಧ ನೀರು ಮತ್ತು ನೈರ್ಮಲ್ಯ ಪರಿಸರ, ಭೂಮಿಯ ಸಂರಕ್ಷಣೆ, ಸುಸ್ಥಿರ ಇಂಧನ ಲಭ್ಯತೆ. ಹವಾಮಾನ ಬದಲಾವಣೆ ತಡೆಯಲು ತುರ್ತು ಕ್ರಮ. ಮೂಲಸೌಕರ್ಯ ಸಂಪನ್ಮೂಲಗಳ ಮಿತಬಳಕೆ, ಸಾಗರ ಮತ್ತು ಜಲ ಸಂಪನ್ಮೂಲಗಳ ಸಂರಕ್ಷಣೆ. ಅರಣ್ಯ ಮತ್ತು ಜೈವಿಕ ವೈವಿಧ್ಯತೆಯ ಸಂರಕ್ಷಣೆ. ದೇಶಗಳ ಒಳಗಿನ ಮತ್ತು ನಡುವಿನ ಅಸಮಾನತೆ ಕಡಿಮೆ ಮಾಡುವುದರ ಜೊತೆಗೆ ಶಾಂತಿ ಮತ್ತು ಪಾಲುದಾರಿಕೆ ದೇಶದ ಅಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದು ಶಾಂತಿ, ನ್ಯಾಯ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುತ್ತದೆ. 'ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆಯ ಜಾಗತಿಕ ದೃಷ್ಟಿಕೋನ ವಿಚಾರ ಸಂಕಿರಣ ಇವೆಲ್ಲ ವಿಚಾರಗಳ ಚರ್ಚೆಗೆ ಪೂರಕವಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಆರಂಭದಿಂದಲೂ ಗ್ರಾಮೀಣ ಜನರ ಅಭಿವೃದ್ಧಿಗಾಗಿ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ.ಗ್ರಾಮೀಣ ಭಾಗಗಳಲ್ಲಿ ಗುಣ ಮಟ್ಟದ ಶಿಕ್ಷಣ ಮತ್ತು ಮೂಲ ಸೌಕರ್ಯಗಳನ್ನು ನೀಡುವುದರಿಂದ ಇಡೀಯ ಸಮಾಜವನ್ನು ಸದೃಢಗೊಳಿಸಬವುದು. ಈ ಮೂಲಕ ದೇಶದವನ್ನು ಜಾಗತೀಕ ಮಟ್ಟದಲ್ಲಿ ಪ್ರಭಾವಶಾಲಿಯಾಗಿ ಬದಲಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅಮೇರಿಕಾದ ಮೆಕ್ಸಿಕೋ ಸಿಟಿಯ ಲ್ಯಾಟಿನ್ ಅಮೆರಿಕನ್ ಫ್ಯಾಕಲ್ಟಿ ಆಫ್ ಸೋಷಿಯಲ್ ಸೈನ್ಸ್ ಪ್ರಾಧ್ಯಾಪಕ ಪ್ರೊ. ಮೇರಿಯಾನೋ ರೋಜಾನ್ ಮಾತನಾಡಿ, ವಿದ್ಯಾರ್ಥಿ ಸಮೂಹದ ಸಕಾರಾತ್ಮಕ ಚಿಂತನೆಗಳ ದೂರ ದೃಷ್ಟಿತ್ವವೇ ಭಾರತದ ಭವಿಷ್ಯ. ಯುವ ಸಮುದಾಯ ಪ್ರತಿಯೊಂದು ಕಾರ್ಯಯೋಜನೆಯಲ್ಲೂ ವಿನೂತನ ಮತ್ತು ಭಿನ್ನವಾಗಿ ಕಾರ್ಯ ರೂಪಕ್ಕೆ ತರುಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಗ್ರಾಮೀಣ ಭಾಗಗಳ ಅಭಿವೃದ್ದಿ ಅವಿಭಾಜ್ಯ ಅಂಗ. ದೇಶದ ಪ್ರಗತಿಯಲ್ಲಿ ಹಳ್ಳಿಗಳ ಬೆಳವಣಿಗೆಯನ್ನೂ ಸಮರೂಪದಲ್ಲಿ ಸಾಗಿಸಿಬೇಕು. ಅದಕ್ಕನುಗುಣವಾಗಿ ಹಳ್ಳಿಗಳಲ್ಲಿ ಕೃಷಿ, ಹೈನುಗಾರಿಕೆ, ಮೂಲಭೂತ ಸೌಕರ್ಯ, ಕೌಶಲ್ಯಾಧಾರಿತ ಶಿಕ್ಷಣ, ಮಹಿಳೆಯರ ಸಬಲೀಕರಣ, ಔದ್ಯೋಗಿಕರಣ ಇತ್ಯಾದಿ ಸಹಜತೆಗಳನ್ನು ಅನುವು ಮಾಡಿಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮತ್ತು ಕಾಲೇಜಿನ ವತಿಯಿಂದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅತಿಥಿಗಳಾದ ಅಮೇರಿಕಾದ ಮೆಕ್ಸಿಕೋ ಸಿಟಿಯ ಲ್ಯಾಟಿನ್ ಅಮೆರಿಕನ್ ಫ್ಯಾಕಲ್ಟಿ ಆಫ್ ಸೋಷಿಯಲ್ ಸೈನ್ಸ್ ಪ್ರಾಧ್ಯಾಪಕ ಪ್ರೊ. ಮೇರಿಯಾನೋ ರೋಜಾನ್ ಮತ್ತು ಶ್ರೀಲಂಕಾ ದೇಶದ ಬಟ್ಟಿಕಲೋವಾದ ಪ್ರಾಕ್ಟಿಷನರ್ ಮತ್ತು ಅಭಿವೃದ್ಧಿ ಸಲಹೆಗಾರ ನಳಿನಿ ರತ್ನರಾಜ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅತಿಥಿಗಳ ಸಂಮುಖದಲ್ಲಿ ISBN ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಬಳಿಕ ನಡೆದ ವಿಚಾರ ಗೋಷ್ಠಿಯಲ್ಲಿ 'ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆ: ಜಾಗತಿಕ ದೃಷ್ಟಿಕೋನ (Rural Livelihoods and Sustainability: A Global Perspective) ವಿಚಾರದ ಕುರಿತು ಪ್ರಧಾನ ಉಪನ್ಯಾಸಕರಾಗಿ ಅಮೇರಿಕಾದ ಮೆಕ್ಸಿಕೋ ಸಿಟಿಯ ಲ್ಯಾಟಿನ್ ಅಮೆರಿಕನ್ ಫ್ಯಾಕಲ್ಟಿ ಆಫ್ ಸೋಷಿಯಲ್ ಸೈನ್ಸ್ ಪ್ರಾಧ್ಯಾಪಕ ಪ್ರೊ. ಮೇರಿಯಾನೋ ರೋಜಾನ್ ಮಾತನಾಡಿದರು. ಸುಸ್ಥಿರ ಗ್ರಾಮೀಣ ಜೀವನೋಪಾಯಕ್ಕಾಗಿ ಸ್ತ್ರೀವಾದಿ ಮಾರ್ಗಗಳು: ಬಿಕ್ಕಟ್ಟಿನ ಸಮಯದಲ್ಲಿ ಮಹಿಳೆಯರು, ಸಾಮಾಜಿಕ ರಕ್ಷಣೆ ಮತ್ತು ಯೋಗ್ಯ ಕೆಲಸ ವಿಷಯದ ಕುರಿತು ಶ್ರೀಲಂಕಾ ದೇಶದ ಬಟ್ಟಿಕಲೋವಾದ ಪ್ರಾಕ್ಟಿಷನರ್ ಮತ್ತು ಅಭಿವೃದ್ಧಿ ಸಲಹೆಗಾರ ನಳಿನಿ ರತ್ನರಾಜ ವಿಚಾರ ಮಂಡನೆ ಮಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಕಾಮರ್ಸ್ ವಿಭಾಗದ ಡೀನ್ ಶಕುಂತಲಾ, ಮುಖ್ಯಸ್ಥೆ ರತ್ನಾವತಿ, ಉಪನ್ಯಾಸಕರು ಮತ್ತು ಕಾರ್ಯಕ್ರಮದ ಸಂಯೋಜಕರಾದ ಗಣರಾಜ್, ಮಹೇಶ್ ಶೆಟ್ಟಿ, ಭಾನು ಪ್ರಕಾಶ್ ಮತ್ತು ಗುರುರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ದೀಕ್ಷಿತಾ ಕುಮಾರಿ ಮತ್ತು ಸಫೀರ ನಿರೂಪಿಸಿದರು. ಉಪನ್ಯಾಸಕ ಗಣರಾಜ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿಭಾಗದ ಡೀನ್ ಶಕುಂತಲಾ ವಂದಿಸಿದರು.

ವಿವಿಧ ದೇಶ-ರಾಜ್ಯದಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಶೋಧಕರು, ವಿದ್ವಾಂಸರು ಭಾಗಿ 

ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಅಮೇರಿಕ, ಶ್ರಿಲಂಕಾ ಸೇರಿದಂತೆ ವಿವಿಧ ದೇಶಗಳ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ. ದೆಹಲಿ, ಮಹಾರಾಷ್ಟ್ರ, ಒಡಿಸ್ಸಾ ಸೇರಿದಂತೆ ರಾಜ್ಯದ ದಕ್ಷಿಣ ಕನ್ನಡ, ಬೆಂಗಳೂರು, ಶಿವಮೊಗ್ಗ, ಹಾಸನ, ಮೈಸೂರು, ಇಳಕಲ್, ತುಮಕೂರು, ಕಲಬುರ್ಗಿ, ಹಂಪಿ ಇತ್ಯಾದಿ ಜಿಲ್ಲೆಗಳಿಂದ 450 ಕ್ಕೂ ಅಧಿಕ ಜನ ವಿದ್ಯಾರ್ಥಿಗಳು, ಸಂಶೋಧಕರು, ವಿದ್ವಾಂಸರು ಭಾಗಿಯಾಗಿ ಅನೇಕ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಮೌಲ್ಯಯುತ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ದೇಶದ ಪ್ರಗತಿಯ ವೈಚಾರಿಕ ಪ್ರಬುದ್ಧತೆಯನ್ನು ಹೆಚ್ಚಿಸಲು ವಿಚಾರ ಮಂಥನ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇದರ ಭಾಗವಾಗಿ ಇಂದು ಕಾಲೇಜಿನಲ್ಲಿ ಅಂತರಾಷ್ಟ್ರೀಯ ವಿಚಾರ ಸಂಕಿರಣ ನಡೆಯುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆ: ಜಾಗತಿಕ ದೃಷ್ಟಿಕೋನಕ್ಕೆ ಪರಿಹಾರೋಪಾಯ ಮಾರ್ಗಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುತ್ತದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಉಜಿರೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಹೇಳಿದ್ದಾರೆ.

      , 

Category
ಕರಾವಳಿ ತರಂಗಿಣಿ