image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇವಸ್ಥಾನದೊಳಗೆ ವಿಕೃತ ಮನಃಸ್ಥಿತಿ ಬೇಡ : ಮಾಣೂರು ಸುಬ್ರಾಯ ದೇವರ ಬ್ರಹ್ಮಕಲಶೋತ್ಸವ ಸಮಾರೋಪದಲ್ಲಿ ಶ್ರೀ ಮಾಣಿಲ ಸ್ವಾಮೀಜಿ

ದೇವಸ್ಥಾನದೊಳಗೆ ವಿಕೃತ ಮನಃಸ್ಥಿತಿ ಬೇಡ : ಮಾಣೂರು ಸುಬ್ರಾಯ ದೇವರ ಬ್ರಹ್ಮಕಲಶೋತ್ಸವ ಸಮಾರೋಪದಲ್ಲಿ ಶ್ರೀ ಮಾಣಿಲ ಸ್ವಾಮೀಜಿ

ಗುರುಪುರ : ದೇವಸ್ಥಾನಗಳಲ್ಲಿ ಪ್ರಭಾವಲಯವಿದ್ದು, ಒಳಗೆ ಪ್ರವೇಶಿಸುವ ಭಕ್ತರಲ್ಲಿ ವಿಕೃತ ಮನೋಭಾವ, ದ್ವೇಷ, ಅಸೂಯೆ, ಸ್ವಾರ್ಥ ಇರಕೂಡದು. ರಾಜಕೀಯ, ಜಾತಿಬೇಧ ಇರಕೂಡದು. ಭಗವಂತ ಮಾತ್ರ ಪೂರ್ಣ. ನಾವು ಪಾತ್ರಧಾರಿಗಳು. ದೇವಸ್ಥಾನ, ಮಠ-ಮಂದಿರಗಳು ಐಕ್ಯತೆ ಸಾರುವ ಕೇಂದ್ರಗಳಾಗಬೇಕು ಎಂದು ವಿಟ್ಲ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ನೀರುಮಾರ್ಗ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಫೆ. 8ರಂದು ಬ್ರಹ್ಮಕಲಶೋತ್ಸವದ ಬಳಿಕ ನಡೆದ ಧರ್ಮಸಭೆಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಎಲ್ಲ ಸಂಪತ್ತು ಅನಂತನಲ್ಲಿ(ನಾಗ ದೇವರು) ಸಂಚಯವಾಗಿದೆ. ಹಾಗಾಗಿ ಈ ಪುಣ್ಯಭೂಮಿಯಲ್ಲಿ ದೇವರ ಕೆಲಸಗಳು ಸುಲಭವಾಗಿ ನಡೆದಿವೆ. ಶಕ್ತಿ ಕೇಂದ್ರಗಳಾದ ದೇವಸ್ಥಾನಗಳು ಪಾಪ ಕ್ಷಯಿಸಿ ಪುಣ್ಯ ನೀಡುವ ತಾಣಗಳಾಗಿವೆ ಎಂದರು.

ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ತುಳುನಾಡಿನ ಸಂಸ್ಕೃತಿ ಜಗತ್ತಿನಲ್ಲೇ ವಿಶಿಷ್ಟವಾದುದು. ಅದು ಹಾಲಿನಲ್ಲಿ ಜೇನು ಸೇರಿದಂತೆ. ನಮ್ಮ ಸಂಸ್ಕೃತಿ ಉಳಿಯಬೇಕು. ಈ ನಿಟ್ಟಿನಲ್ಲಿ ಇನ್ನಷ್ಟು ಕೆಲಸಗಳಾಗಬೇಕು. ತುಳು ಸಂಸ್ಕೃತಿ, ಲಿಪಿ ನಮ್ಮದಾಗಬೇಕು. ಸನಾತನ ಹಿಂದೂ ಧರ್ಮದ ಸಂಸ್ಕಾರಗಳು ಮಠ-ಮಂದಿರ, ಮನೆಗಳಲ್ಲಿ ಕಂಡು ಬರುವಂತಾಗಬೇಕು ಎಂದು ಹೇಳಿದರು. ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಅನಂತ ಆಸ್ರಣ್ಣ ಆಶೀರ್ವಚನ ನೀಡಿ, ನಾಗ ಧರ್ಮ ಉಳಿಸುವ ದೇವರು. ದೇವಾಲಯದ ಜೀರ್ಣೋದ್ಧಾರದಲ್ಲಿ ಪಾಲು ಪಡೆದ ಎಲ್ಲರಿಗೂ ನಾಗ ದೇವರ ಅನುಗ್ರಹ ಇರಲಿ ಎಂದರು. ಮಾಜಿ ಸಂಸದ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಇದು ನಾನು ಮಾಡಿದ ಕೆಲಸವಲ್ಲ. ದೇವರು ನಮ್ಮಿಂದ ಮಾಡಿಸಿದ ಕೆಲಸ. ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಆದ್ದರಿಂದ ಫಲಾಪೇಕ್ಷೆ ಬೇಡ. ಹಿಂದೂಗಳ ಪುಣ್ಯ ಕ್ಷೇತ್ರಗಳಲ್ಲಿ ನಡೆಯುವ ಒಂದು ಉತ್ಸವದಿಂದ ಹಲವು ಕುಟುಂಬಗಳಿಗೆ ಒಳಿತಾಗುತ್ತದೆ. ಯಾಕೆಂದರೆ ಅಲ್ಲಿ ಕೋಟ್ಯಂತರ ರೂ ವ್ಯವಹಾರ ನಡೆಯುತ್ತದೆ. ಸಂಸ್ಕೃತಿ ಉಳಿದರೆ ದೇಶ ಉಳಿಯುತ್ತದೆ. ಗ್ರಾಮೋದ್ಧಾರದೊಂದಿಗೆ ರಾಷ್ಟ್ರೋತ್ಥಾನವಾಗಲಿ ಎಂದರು.

ಮoಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ನಾವು ಹಿಂದೂ ಎಂದು ಎದೆ ತಟ್ಟಿ ಹೇಳುವ ಕಾಲ ಬಂದಿದೆ. ಹಿಂದೂತ್ವದ ಬಗ್ಗೆ ಮಾತನಾಡುವುದೆಂದರೆ ಅನ್ಯ ಧರ್ಮಗಳ ವಿರುದ್ಧ ಮಾತನಾಡುವುದಲ್ಲ. ನಮ್ಮ ಧರ್ಮದ ಬಗ್ಗೆ ನಾವಲ್ಲದೆ ಬೇರೆಯವರು ಮಾತನಾಡಲು ಸಾಧ್ಯವಿಲ್ಲ. ಉರೂಸ್‌ನಲ್ಲಿ ಹಿಂದೂ ಧರ್ಮದ ಪ್ರಚಾರ ಮಾಡಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. ಉದ್ಯಮಿ ಮಹಾಬಲ ಕೊಟ್ಟಾರಿ ಮಾತನಾಡಿ, ಶ್ರಮದಾನ ಮಾಡಿದವರಿಂದ ಹಿಡಿದು ಪ್ರತಿಯೊಬ್ಬರಿಗೂ ಸುಬ್ರಾಯ ದೇವರು ಒಂದಕ್ಕೆ ೧೦ ಸೇರಿಸಿ ಪುಣ್ಯ ದಯಪಾಲಿಸಲಿ ಎಂದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ), ವೇದಮೂರ್ತಿ ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಧರ ಭಟ್ ಬೊಳ್ಮಾರಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿ ವಿಜಯ ಕೋಟ್ಯಾನ್ ಪಡು, ವ್ಯವಸ್ಥಾಪನಾ ಸಮಿತಿ ಸದಸ್ಯ ಭಾಸ್ಕರ ಜೆ. ಮಾಣೂರು ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರೆ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ಪ್ರಮುಖರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಉದ್ಯಮಿ ಪ್ರಶಾಂತ್ ಸನಿಲ್, ಗುತ್ತಿಗೆದಾರ ಮಂಜುನಾಥ ನೀರಲ, ಬಂಟ್ವಾಳ ಆರ್‌ಟಿಒ ಚರಣ್, ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ ಚಿಕ್ಕಬೆಟ್ಟು, ವ್ಯವಸ್ಥಾಪನಾ ಸಮಿತಿ ಸರ್ವ ಸದಸ್ಯರು, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಹಾಗೂ ಉಪ-ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಊರ ಹಾಗೂ ಪರವೂರ ಗಣ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಭಕ್ತರು ಉಪಸ್ಥಿತರಿದ್ದರು. ರೋಹಿತ್ ಮಾಣೂರು ಪ್ರಾರ್ಥನೆಗೈದರು. ಪತ್ರಕರ್ತ ವಿಜಯ್ ಕೋಟ್ಯಾನ್ ಪಡು ಸ್ವಾಗತಿಸಿ ಪ್ರಸ್ತಾವಿಸಿದರೆ, ದಿನೇಶ್ ಸುವರ್ಣ ರಾಯಿ ನಿರೂಪಿಸಿದರು. ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ) ವಂದಿಸಿದರು.

ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಫೆ. ೮ರಂದು ನಡೆದ ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲ್ಪಟ್ಟ ವಿಶ್ವಕಪ್ ವಿಜೇತ ಭಾರತ ಕಬ್ಬಡಿ ತಂಡದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಸುರತ್ಕಲ್ ಅವರು ಮಾತನಾಡಿ, ``ಈ ಬಾರಿ ದೇಶಕ್ಕೆ ಚಿನ್ನದ ಪದಕ ತಂದಿದ್ದೇನೆ. ಪದಕ ಬೇಟೆ ಇಲ್ಲಿಗೆ ನಿಲ್ಲುವುದಿಲ್ಲ. ಊರು, ರಾಜ್ಯ, ದೇಶಕ್ಕೆ ಇನ್ನಷ್ಟು ಪದಕ ತರಲು ಶ್ರಮಿಸುತ್ತೇನೆ. ದೇವರ ದಯೆ ಒಂದಿದ್ದರೆ ಎಲ್ಲವೂ ಸಾಧ್ಯ'' ಎಂದರು.

Category
ಕರಾವಳಿ ತರಂಗಿಣಿ