image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಐಕಳೋತ್ಸವದಲ್ಲಿ ಡಾ. ರಾಜೇಂದ್ರ ಕುಮಾರ್ ಗೆ 'ಕಂಬಳ ರತ್ನ' ಪ್ರಶಸ್ತಿ ನೀಡಿ ಗೌರವ

ಐಕಳೋತ್ಸವದಲ್ಲಿ ಡಾ. ರಾಜೇಂದ್ರ ಕುಮಾರ್ ಗೆ 'ಕಂಬಳ ರತ್ನ' ಪ್ರಶಸ್ತಿ ನೀಡಿ ಗೌರವ

ಮಂಗಳೂರು : ಐಕಳಬಾವ ಕಾಂತಾಬಾರೆ-ಬೂದಾಬಾರೆ ಕಂಬಳ ಸಮಿತಿ, ಐಕಳ ಮತ್ತು ಮುಂಬಯಿ ಇದರ ವತಿಯಿಂದ ಸಹಕಾರ ರಂಗದ ದಿಗ್ಗಜ, ಕಂಬಳ ಮಹಾಪೋಷಕ ಡಾ. ಎಂ. ಎನ್‌. ರಾಜೇಂದ್ರ ಕುಮಾರ್‌ ಅವರಿಗೆ ತುಳುನಾಡಿನ ಸಮಸ್ತ ಕಂಬಳ ಅಭಿಮಾನಿಗಳಿಂದ ಶನಿವಾರ ಕಾಂತಾಬಾರೆ - ಬೂದಾಬಾರೆ ಕಂಬಳದ ಸುವರ್ಣ ಸಂಭ್ರಮದ ಐಕಳ್ಳೋತ್ಸವದಲ್ಲಿ "ಕಂಬಳ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂಆರ್‌ಜಿ ಗ್ರೂಪ್‌ ಚೇರ್ಮನ್‌ ಡಾ| ಕೆ. ಪ್ರಕಾಶ್‌ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಅದಾನಿ ಸಮೂಹ ಸಂಸ್ಥೆಗಳ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್‌ ಆಳ್ವ, ಕ್ರೀಡಾ ಇಲಾಖೆ ಆಯುಕ್ತ ಚೇತನ್‌ ಆರ್‌. ಉದ್ಯಮಿ ಕೃಷ್ಣ ಶೆಟ್ಟಿ, ಹರಿಕೃಷ್ಣ ಪುನರೂರು, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಶಶಿಕುಮಾರ್‌ರೈ ಬಾಲ್ಯೊಟ್ಟು, ವಾದಿರಾಜ್‌ ಶೆಟ್ಟಿ ಮುಂತಾದವರ ಉಪಸ್ಥಿತಿಯಲ್ಲಿ "ಕಂಬಳ ರತ್ನ' ಪ್ರಶಸ್ತಿ ಅರ್ಪಿಸಲಾಯಿತು. ಸಹಕಾರಿ ಕ್ಷೇತ್ರವನ್ನೇ ತನ್ನ ಉಸಿರಾಗಿಸಿಕೊಂಡಿರುವ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಅವರು "ಅಭಿನವ ಮೊಳಹಳ್ಳಿ' ಎಂದೇ ಪ್ರಸಿದ್ಧಿ ಪಡೆದವರು. ಸಹಕಾರ ರಂಗದ ಸಮಕಾಲೀನ ಸಾರ್ವಭೌಮರಾಗಿ, ಆರ್ಥಿಕ ಸಶಕ್ತೀಕರಣದ ರೂವಾರಿಯಾಗಿ, "ಸರ್ವರಿಗೂ ಸಮಪಾಲು, ಸಮಬಾಳು' ಎನ್ನುವ ತತ್ವದಲ್ಲಿ ನಂಬಿಕೆಯನ್ನಿಟ್ಟುಕೊಂಡವರು. ತನ್ನ ಅನನ್ಯ ಸೇವೆಯಿಂದ ಸಹಕಾರಿ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಡುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೀರ್ತಿ ಪತಾಕೆಯನ್ನು ದಿಗಂತದೆತ್ತರಕ್ಕೇರಿಸಿದ ಇವರು ಸಹಕಾರಿಗಳೆಲ್ಲರ ಪಾಲಿಗೆ ಮಾರ್ಗದರ್ಶಕರು. ಅವರು ಸಮಾಜಸೇವಾ ಕ್ಷೇತ್ರದಲ್ಲಿ ದೃಢಸಂಕಲ್ಪದೊಂದಿಗೆ ಮಹತ್ತರವಾದ ಕಾರ್ಯನಿರ್ವಹಣೆ ಮೂಲಕ ರಾಷ್ಟ್ರ ಮಟ್ಟದಲ್ಲಿ ಪ್ರಭಾವಶಾಲಿ ನಾಯಕತ್ವದಿಂದ ಗುರುತಿಸಿಕೊಂಡವರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್‌ ನಿ., ಮಂಗಳೂರು ಇದರ ಅಧ್ಯಕ್ಷರಾಗಿ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ಇದರ ಸಂಸ್ಥಾಪಕರಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ.

ಸಹಕಾರ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿರುವ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ಕಾರ್ಯ ಸಾಧನೆಯನ್ನು ಗುರುತಿಸಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಅರಸಿ ಬಂದಿವೆ. ಈ ಬಾರಿ ಅವರು ವಿಶ್ವ ಜಾಗತಿಕ ಪ್ರಭಾವಿ ನಾಯಕತ್ವ ಶ್ರೇಷ್ಠತಾ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿ ಹಾಗೂ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಮಹಿಳಾ ಸಶಕ್ತೀಕರಣಕ್ಕಾಗಿ "ವಿಷನರಿ ಲೀಡರ್‌ಶಿಪ್‌ ಅವಾರ್ಡ್‌' ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕೇವಲ ಸಹಕಾರ ಕ್ಷೇತ್ರಕ್ಕೆ ಮಾತ್ರವಲ್ಲ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲೂ ನಿಮ್ಮ ಕೊಡುಗೆ ಉಲ್ಲೇಖನೀಯ. ಸಹಕಾರಿ ಕ್ಷೇತ್ರದಲ್ಲಿ ಹೊಳೆಯುವ ನಕ್ಷತ್ರವಾಗಿ, ಜನಮಾನಸದಲ್ಲಿ ಕಂಗೊಳಿಸುತ್ತಿರುವ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಅವರು ಕರಾವಳಿಯ ಜಾನಪದ ಕ್ರೀಡೆ ಎನಿಸಿದ "ಕಂಬಳ'ಕ್ಕೂ ನೀಡಿದ ಕೊಡುಗೆ ಅನನ್ಯವಾದದ್ದು. ಐಕಳ ಕಂಬಳ್ಳೋತ್ಸವ ಸಮಿತಿ ಅಧ್ಯಕ್ಷ ಐಕಳಬಾವ ಡಾ| ದೇವಿಪ್ರಸಾದ್‌ ಶೆಟ್ಟಿ ಅವರು ಈ ವೇಳೆ ಮಾತನಾಡುತ್ತ, ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿಗೆ ಗೌರವಾಧ್ಯಕ್ಷರಾಗಿ ಡಾ| ಎಂಎನ್‌ಆರ್‌ಅವರನ್ನು ನೇಮಕ ಮಾಡಿದ್ದೇವೆ, ಆ ಬಳಿಕ ಅದರ ಮೆರುಗು ಜಾಸ್ತಿಯಾಗಿದೆ, ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಈ ಕಂಬಳಕ್ಕೆ ಸಂಪ್ರದಾಯದೊಂದಿಗೆ ಆಧುನಿಕ ಸ್ಪರ್ಶ ಕೊಡುವಲ್ಲಿ ಮಾರ್ಗದರ್ಶನ, ಸಹಕಾರ ಬಹಳಷ್ಟು ಇದೆ, ರಾಜೇಂದ್ರ ಕುಮಾರ್‌ಅವರು ಧಾರ್ಮಿಕ, ಸಾಮಾಜಿಕ, ಸಹಕಾರ ಕ್ಷೇತ್ರದಲ್ಲಿ ನೀಡಿದಷ್ಟೇ ಉತ್ಸಾಹದಿಂದ ಕಂಬಳ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ, ಅದಕ್ಕಾಗಿ ಅವರಿಗೆ ಕಂಬಳರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

Category
ಕರಾವಳಿ ತರಂಗಿಣಿ