image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅ.3ರಿಂದ 14ರವರೆಗೆ ಮಂಗಳೂರು ದಸರಾ: ಅ.6ರಂದು ಹಾಫ್ ಮ್ಯಾರಥಾನ್

ಅ.3ರಿಂದ 14ರವರೆಗೆ ಮಂಗಳೂರು ದಸರಾ: ಅ.6ರಂದು ಹಾಫ್ ಮ್ಯಾರಥಾನ್

ಮಂಗಳೂರು : ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾ ಮಹೋತ್ಸವ ಅಕ್ಟೋಬರ್ 3ರಿಂದ 14ರವರೆಗೆ ನಡೆಯಲಿದ್ದು, ದಸರಾ ವಿಶೇಷ ಕಾರ್ಯಕ್ರಮವಾಗಿ ಅ.6ರಂದು ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ. ಅವರು ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1991ರಿಂದ ಆರಂಭಗೊಂಡ 'ಮಂಗಳೂರು ದಸರಾ ವೈಭವವವು ಕುದ್ರೋಳಿಯ ಗೋಕರ್ಣನಾಥನ ಕೃಪೆಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ಇದನ್ನು ಈ ಹಂತಕ್ಕೆ ಬೆಳೆಸಿದವರು ಜನರು ಎಂದರು. ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್‌ ಮಾತನಾಡಿ, ಮಂಗಳೂರು ದಸರಾ ಮಹೋತ್ಸವ ಹಾದು ಹೋಗುವ ರಸ್ತೆ ಸೇರಿದಂತೆ ನಗರದ ಕಟ್ಟಡಗಳನ್ನು ಅಲಂಕರಿಸುವ ಮೂಲಕ ಮಹೋತ್ಸವಕ್ಕೆ ಮತ್ತಷ್ಟು ವೈಭವ ತುಂಬಬೇಕು ಎಂದರು.

ಮಂಗಳೂರು ದಸರಾ ವೈಭವದ ಬಗ್ಗೆ ಮಾಹಿತಿ ನೀಡಿದ ದೇವಸ್ಥಾನ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್ ಅ. 3ರಂದು ಬೆಳಗ್ಗೆ 8.30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಮಂಗಳೂರು ದಸರಾ ಆರಂಭಗೊಂಡು ಅ. 14ರಂದು ಬೆಳಗ್ಗೆ 8ಕ್ಕೆ ಗುರುಪೂಜೆಯೊಂದಿಗೆ ಸಮಾಪನಗೊಳ್ಳಲಿದೆ ಎಂದರು.

ದಸರಾ ಸಂದರ್ಭ ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶ ಹಾಗೂ ತುಳುನಾಡಿನ ಸಂಸ್ಕೃತಿಗೆ ಅನುಗುಣವಾಗ ಅ.13ರಂದು ವೈಭವದ ಮೆರವಣಿಗೆ ನಡೆಯಲಿದೆ. ದಸರಾ ಪ್ರಯುಕ್ತ ಕಳೆದ ವರ್ಷ ವಾಕಥಾನ್ ನಡೆಸಲಾಗಿದ್ದು, ಈ ಬಾರಿ ಅ.6ರಂದು ಬೆಳಗ್ಗೆ 5.30ಕ್ಕೆ ಕ್ಷೇತ್ರದಿಂದ 21 ಕಿ.ಮೀ.ಗಳ ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಮ್ಯಾರಥಾನ್ ನಲ್ಲಿ ಸುಮಾರು 2000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.  ದಸರಾ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಇತ್ತೀಚೆಗೆ ನಡೆದ ಕ್ಷೇತ್ರದ ಸಮಿತಿ ಸಭೆಯಲ್ಲಿ ದ್ವಾರದ ಒಳಭಾಗದಲ್ಲಿ ಸಂತೆಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಬರುವ ಭಕ್ತರಿಗೆ ಸೂಕ್ತ ಅವಕಾಶ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಈ ತೀರ್ಮಾನ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಹರಾಜು ಮೂಲಕ ಜಾತ್ರಾ ಸಂತೆಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಇದನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗುತ್ತಿತ್ತು. ಆದರೆ ಈ ಬಾರಿ ವ್ಯಕ್ತಿಯೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿರುವುದರಿಂದ ಮನಪಾಕ್ಕೆ ಒಳಪಟ್ಟ ರಸ್ತೆಯಲ್ಲಿ ಮನಪಾ ವತಿಯಿಂದ ಹರಾಜು ಮೂಲಕ ಜಾತ್ರಾ ಸಂತೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಪದ್ಮರಾಜ್ ತಿಳಿಸಿದರು.

ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರುವಾರಿ ಬಿ. ಜನಾರ್ದನ ಪೂಜಾರಿಯವರು ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಅ.13ರಂದು ಸಂಜೆ 4ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಮಂಗಳೂರು ದಸರಾ ಬೃಹತ್ ಶೋಭಾಯಾತ್ರೆ ಆರಂಭವಾಗಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ಎಂ. ಶೇಖ‌ರ್ ಪೂಜಾರಿ, ಜಗದೀಪ್‌ ಡಿ. ಸುವರ್ಣ, ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ-ಉಪಾಧ್ಯಕ್ಷೆ ಡಾ. ಅನಸೂಯ ಬಿ.ಟಿ. ಸಾಲ್ಯಾನ್, ಉಪಾಧ್ಯಕ್ಷರಾದ ಬಿ.ಜಿ. ಸುವರ್ಣ, ದೇವಳ ಅಭಿವೃದ್ಧಿ ಸಮಿತಿ ಸದಸ್ಯರಾದ ಕಿಶೋ‌ರ್ ದಂಡೆಕೇರಿ, ವಾಸುದೇವ ಕೋಟ್ಯಾನ್, ಎಚ್.ಎಸ್‌. ಜೈರಾಜ್, ಲತೀಶ್ ಎಂ. ಸುವರ್ಣ,ರಾಧಾಕೃಷ್ಣ, ಲೀಲಾಕ್ಷ ಕರ್ಕೇರಾ, ಚಂದನ್ಹಾಸ್, ಗೌರವಿ ರಾಜಶೇಖರ್, ಕೃತಿನ್ ದೀರಾಜ್ ಅಮೀನ್‌ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ