ಮಂಗಳೂರು: ಸಿದ್ದರಾಮಯ್ಯ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಹೇಳಿಕೆ ನೀಡುತ್ತಿದ್ದಾರೆ. ನಿರ್ಮಲಾ ಸೀತಾರಾಮ್ ಪ್ರಕರಣಕ್ಕೂ ಸಿದ್ದರಾಮಯ್ಯ ಪ್ರಕರಣಕ್ಕೂ ವ್ಯತ್ಯಾಸ ಇದೆ. ಕತ್ತೆಗೂ ಕುದುರೆಗೂ ಹೋಲಿಕೆ ಸರಿಯಲ್ಲ. ಸಿದ್ದರಾಮಯ್ಯ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಿ ನೈತಿಕ ಹೊಣೆ ಹೊತ್ತು ಈ ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ 10 ದಿನಗಳ ಹಿಂದೆ ನನ್ನ 40 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದರು. ಆದರೆ ಮುಡಾ ಹಗರಣದ ಬಗ್ಗೆ ನ್ಯಾಯಾಲಯ ತನಿಖೆಗೆ ಆದೇಶ ನೀಡಿದ ಬಳಿಕ ಕಾಂಗ್ರೆಸ್ ಪಟಾಲಂ ತನ್ನ ಸ್ಥಿಮಿತ ಕಳೆದುಕೊಂಡು, ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದೆ.
ಸಚಿವ ಜಮೀರ್ ಅಹಮ್ಮದ್ ನ್ಯಾಯಾಲಯದ ಆದೇಶ ರಾಜಕೀಯದ ಆದೇಶ ಎಂದು ಹೇಳಿದ್ದಾರೆ. ಕಾಂಗ್ರೆಸ್ ನವರಿಗೆ ನ್ಯಾಯಾಲಯ ಹಾಗೂ ನ್ಯಾಯಾಧೀಶರ ಮೇಲೆ ಗೌರವವಿಲ್ಲ. ಮಾತು ಮಾತಿಗೆ ಸಂವಿಧಾನದಂತೆ ನಡೆದುಕೊಳ್ಳುವೆ ಕಾನೂನಿಗೆ ತಲೆ ಬಾಗುವೆ ಎನ್ನುವ ಸಿದ್ದರಾಮಯ್ಯ ಎಲ್ಲವನ್ನು ಮರೆತಿದ್ದಾರೆ. 2012-13ರಲ್ಲಿ ಇದೇ ಸಿದ್ದರಾಮಯ್ಯ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿದ್ದರು. ಈಗ ಆ ಮಾತು ಸಿದ್ದರಾಮಯ್ಯನವರಿಗೆ ನೆನಪಿರಲಿಲ್ಲವೇ? ಆ ಮಾತಿನಂತೆ ನೀವು ಬದ್ಧತೆಯಿಂದ ನಡೆದುಕೊಳ್ಳುತ್ತೀರಿ ಎಂಬ ವಿಶ್ವಾಸ ಇದೆ. ಭಂಡತನ ತೋರದೆ ಈ ತಕ್ಷಣವೇ ರಾಜೀನಾಮೆ ನೀಡಿ ಎಂದು ಭಗವಂತ ಖೂಬಾ ಆಗ್ರಹಿಸಿದರು.