ಮಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ನೇತೃತ್ವದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡಾಗಿ ಇನ್ನೊಬ್ಬರ ಸಾವು ಸಂಭವಿಸಿದರೆ 10 ವರ್ಷ ಜೈಲು ಶಿಕ್ಷೆಯಾಗುವ ಕಲಂ 105 ಬಿ.ಎನ್.ಎಸ್ ಕಾಯ್ದೆಯಡಿ ಮಾನವ ಹತ್ಯೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಪ್ರಾಪ್ತರಿಗೆ ವಾಹನ ನೀಡುವುದು ಮತ್ತು ಕುಡಿದು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ನಿಯಮ ಪಾಲನೆಯಾಗುತ್ತಿಲ್ಲ. ಮಂಗಳೂರು ನಗರ ವ್ಯಾಪ್ತಿಯಲ್ಲಿ 2025ನೇ ಸಾಲಿನಲ್ಲಿ ಸಂಭವಿಸಿದ 171 ರಸ್ತೆ ಅಪಘಾತಗಳಲ್ಲಿ 25 ಪ್ರಕರಣಗಳಲ್ಲಿ ಅಪ್ರಾಪ್ತರ ವಾಹನ ಚಲಾವಣೆ ಆಗಿದ್ದರೆ, ಇನ್ನು ಕೆಲ ಪ್ರಕರಣಗಳಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಇನ್ನೊಬ್ಬರ ಪ್ರಾಣಹಾನಿಯಾಗಿದೆ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ಈ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಈಗಾಗಲೇ ಸಂಚಾರ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಮಂಗಳೂರಿನಲ್ಲಿ ಅಪಘಾತದಿಂದ ಸಂಭವಿಸಿರುವ ಸಾವು ಪ್ರಕರಣಗಳಲ್ಲಿ 169 ಪ್ರಕರಣಗಳು ನಿರ್ಲಕ್ಷದಿಂದಾಗಿಯೇ ಆಗಿರುವುದು. ಒಂದೆರಡು ಸಾವುಗಳು ರಸ್ತೆಯಲ್ಲಿ ಗುಂಡಿ ಅಥವಾ ಇತರ ಕಾರಣದಿಂದ ಆಗಿದ್ದು, ಈ ಸಂದರ್ಭ ಸರ್ಕಾರ ಅಥವಾ ಆಡಳಿತವನ್ನು ದೂರಲಾಗುತ್ತದೆ. ಆದರೆ ನಿರ್ಲಕ್ಷೃದಿಂದ ಆಗುವ ನೂರಾರು ಸಾವುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಜಾಗೃತಿಯಿಂದ ವಾಹನ ಚಲಾಯಿಸಬೇಕೆಂಬ ಬಗ್ಗೆ ಗಮನ ಇಲ್ಲ. ಕೊಲೆ ಆದಾಗ ಅದಕ್ಕೆ ಮತೀಯ ಬಣ್ಣ ನೀಡುವ, ಕೆಲವೊಂದು ಸಂದರ್ಭ ಅಪಘಾತಗಳ ವೇಳೆಯೂ ಅದಕ್ಕೆ ಕೋಮು ಬಣ್ಣ ಹಚ್ಚುವ ಪ್ರಯತ್ನಗಳು ಇಲ್ಲಿ ನಡೆಯುತ್ತಿವೆ. ಅದಕ್ಕೆ ಅವಕಾಶ ನೀಡಲಾಗದು ಎಂದು ಪೊಲೀಸ್ ಆಯಕ್ತರು ಈ ಸಂದರ್ಭ ಎಚ್ಚರಿಕೆಯ ಸಂದೇಶ ನೀಡಿದರು.