ಮಂಗಳೂರು - ಕರಾವಳಿ ಉತ್ಸವ-2025 ರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಂಟಿ ಸಹಯೋಗದಲ್ಲಿ ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಕುಡ್ಲ ಶ್ವಾನ ಪ್ರದರ್ಶನ ಕಾರ್ಯಕ್ರಮವನ್ನು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ ಉದ್ಘಾಟಿಸಿದರು. ಶ್ವಾನ ಪ್ರದರ್ಶನದಲ್ಲಿ ಮೂರು ವಿಭಾಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮೂರರಿಂದ ಆರು ತಿಂಗಳ ಮರಿಗಳ ಮೊದಲನೇ ವಿಭಾಗ, 6 ರಿಂದ 12 ತಿಂಗಳ ಮರಿಗಳ ಎರಡನೇ ವಿಭಾಗ ಹಾಗೂ 12 ತಿಂಗಳು ಮೇಲ್ಪಟ್ಟ ಶ್ವಾನಗಳ ತಳಿವಾರು ವಿಭಾಗದಲ್ಲಿ ಸುಮಾರು 230 ಶ್ವಾನಗಳು ಭಾಗವಹಿಸಿದ್ದವು. ಶ್ವಾನ ಪ್ರದರ್ಶನದಲ್ಲಿ ಪಗ್, ಪೂಡಲ್, ಜರ್ಮನ್ ಶೆಫರ್ಡ್, ರಾಟ್ ವೀಲರ್, ಶಿಟ್ಜು, ಬೀಗಲ್, ಅಮೆರಿಕನ್ ಬುಲ್ಲಿ, ಬಾಕ್ಸರ್, ಗೋಲ್ಡನ್ ರಿಟ್ರಿವರ್, ಲ್ಯಾಬ್ರಡಾರ್, ಮಿನಿಯೇಚರ್ ಪಿನ್ಸ್ಚರ್ ಮುಂತಾದ 30 ವಿವಿಧ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು.
ಎಲ್ಲಾ ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ವಿಜೇತ ಶ್ವಾನಗಳಿಗೆ ಪದಕ ಸಹಿತ ಪ್ರಮಾಣ ಪತ್ರ, ಸ್ಮರಣಿಕೆ ಹಾಗೂ ತಲಾ ರೂ.2,000, ರೂ.1,500 ಹಾಗೂ ರೂ.1,000 ಮೌಲ್ಯದ ಗಿಫ್ಟ್ ವೋಚರ್‍ಗಳನ್ನು ನೀಡಲಾಯಿತು. ಹಾಗೂ ಭಾಗವಹಿಸಿದ ಎಲ್ಲಾ ಶ್ವಾನಗಳಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಲಾಯಿತು. ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ಶ್ವಾನದಳದ ಶ್ವಾನಗಳು ತಮ್ಮ ಕೌಶಲ್ಯ, ಚಾತುರ್ಯ ಹಾಗೂ ಚಾಕಚಕ್ಯತೆ ಪ್ರದರ್ಶಿಸಿ ನೆರೆದಿದ್ದ ಜನರ ಮನರಂಜಿಸಿದವು. ವಿಶೇಷ ತಳಿಗಳಾದ ಗ್ರೇಟ್ ಡೆನ್, ಚೌಚೌ, ಗೋಲ್ಡನ್ ಡೂಡಲ್, ಡಾಗೋ ಅರ್ಜೆಂಟೀನಾ, ಬೆಲ್ಜಿಯನ್ ಮೆಲಿನೊಸಿಸ್, ಜ್ಯಾಕ್ ರಸ್ಸೆಲ್ ಟೆರಿಯರ್ ತಳಿಯ ಶ್ವಾನಗಳು ಭಾಗವಹಿಸಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಶಿಟ್ಜು ತಳಿಯ ಶ್ವಾನಗಳು ವಿಶೇಷವಾಗಿ ಅಲಂಕೃತಗೊಂಡು ನೆರೆದಿದ್ದವರ ಗಮನ ಸೆಳೆದವು.
ಪ್ರತಿ ವಿಭಾಗದಲ್ಲಿ ಮೊದಲನೇ ಸ್ಥಾನ ವಿಜೇತ ಶ್ವಾನಗಳು ಚಾಂಪಿಯನ್ ಸುತ್ತಿನಲ್ಲಿ ಸ್ಪರ್ಧಿಸಿದವು. ಸ್ಪರ್ಧೆಯ ಅಂತಿಮ ಸುತ್ತಿನ ನಂತರ ನಾಲ್ಕನೇ ರನ್ನರ್ ಅಪ್ ಆದ ಸುರತ್ಕಲ್ ಆರಾಧ್ಯ ಅವರ ಗೋಲ್ಡನ್ ರಿಟ್ರಿವರ್ ತಳಿಯ ಚೀಕು ಹೆಸರಿನ ಶ್ವಾನಕ್ಕೆ ರೂ.5,000 ನಗದು ಬಹುಮಾನ ಮತ್ತು ಟ್ರೋಫಿ, ಮೂರನೇ ರನ್ನರ್ ಅಪ್ ಆದ ಮಂಗಳೂರಿನ ಭರತ್ ಪ್ರಸಾದ್ ಅವರ ಕ್ಯಾರವನ್ ಹೌಂಡ್ ತಳಿಯ ಬಿಂದು ಹೆಸರಿನ ಶ್ವಾನಕ್ಕೆ ರೂ.10,000 ನಗದು ಬಹುಮಾನ ಮತ್ತು ಟ್ರೋಫಿ, ಎರಡನೇ ರನ್ನರ್ ಅಪ್ ಆದ ಮಂಗಳೂರಿನ ರಾಯಿಸ್ಟನ್ ಅವರ ರಾಟ್ ವೀಲರ್ ತಳಿಯ ಕ್ಯಾಲಿ ಹೆಸರಿನ ಶ್ವಾನಕ್ಕೆ ರೂ.15,000 ನಗದು ಬಹುಮಾನ ಮತ್ತು ಟ್ರೋಫಿ, ಮೊದಲನೇ ರನ್ನರ್ ಅಪ್ ಆದ ಮಂಗಳೂರಿನ ಶಿಶಿರ್ ಅವರ ಲಾಸಾ ತಳಿಯ ಸಾನ್ಸ ಹೆಸರಿನ ಶ್ವಾನಕ್ಕೆ ರೂ.20,000 ನಗದು ಬಹುಮಾನ ಮತ್ತು ಟ್ರೋಫಿ ಹಾಗೂ ಚಾಂಪಿಯನ್ ಆಗಿ ಹೊರಹೊಮ್ಮಿದ ಉಡುಪಿಯ ಸುನಿಲ್ ಕುಮಾರ್ ಅವರ ಜರ್ಮನ್ ಶೆಫರ್ಡ್ ತಳಿಯ ಓಟ್ ಮೆನ್ ಹೆಸರಿನ ಶ್ವಾನಕ್ಕೆ ರೂ.25,000 ನಗದು ಬಹುಮಾನ ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು.
ಶ್ವಾನ ಪ್ರದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ, ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ಮತ್ತಿತರರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಎನ್. ಸ್ವಾಗತಿಸಿದರು. ಮಂಗಳೂರು ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ.ಅಶೋಕ್ ಕೆ. ಆರ್. ರವರು ವಂದಿಸಿದರು. ಶರ್ಮಿಳಾ ಹಾಗೂ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.