ಮಂಗಳೂರು : ಕರಾವಳಿ ಕರ್ನಾಟಕ ಭಾಗದ ಸಾಂಪ್ರದಾಯಿಕ ಜನಪದ ಕ್ರೀಡೆಯಾದ ಕಂಬಳವನ್ನು ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಬೇಕ್ಕೆನ್ನುವ ಉದ್ದೇಶದಿಂದ ಜಯ-ವಿಜಯ ಜೋಡುಕರೆ ಕಂಬಳ ಸಮಿತಿ (ರಿ) ಜಪ್ಪಿನಮೊಗರು ಇವರ ನೇತೃತ್ವದಲ್ಲಿ ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಕೀರ್ತಿಶೀಷ ಜೆ. ಜಯಗಂಗಾಧರ ಶೆಟ್ಟಿಯವರ ಸ್ಮರಣಾರ್ಥ 16ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ಫೆ 14 ಮತ್ತು 15 ರಂದು ನಡೆಯಲಿದೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಸಮಿತಿಯಯ ಗೌರವಾಧ್ಯಕ್ಷರಾದ ಡಿ. ವೇದವ್ಯಾಸ ಕಾಮತ್ ತಿಳಿಸಿದರು.
ನಗರದ ಓಷಲ್ ಪರ್ಲ್ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತಾನಾಡಿ ಅವರು ಫೆ 14 ರಂದು ಬೆಳಿಗ್ಗೆ 8.30ಕ್ಕೆ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳು ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾಗಿರುವ ಎಸ್. ಗಣೇಶ್ ರಾವ್ ಇವರ ಅಧ್ಯಕ್ಷತೆಯಲ್ಲಿ, ಅನಂತಪದ್ಮನಾಭ ಅಸ್ರಣ್ಣರ ಆಶೀರ್ವಚನದೊಂದಿಗೆ,ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿವರ್ಯರಿಂದ ಕಂಬಳವು ಉದ್ಘಾಟನೆಗೊಳ್ಳಲಿದೆ.ಸುಬ್ಬಯ್ಯ ಭಂಡಾರಿ ಪಟ್ಟದ ಯಜಮಾನರು ಜಪ್ಪುಗುಡ್ಡೆಗುತ್ತು ಹಾಗೂ ಇತರ ಅನೇಕ ಗಣ್ಯ ಅತಿಥಿಗಳು ಈ ಸಂದರ್ಭದಲ್ಲಿ ಇರಲಿದ್ದಾರೆ ಎಂದರು
ಸಾಯಂಕಾಲ ಗಂಟೆ 7.00ಕ್ಕೆ ಸಭಾ ಕಾರ್ಯಕ್ರಮವು ಶಾಸಕರಾದ ಡಿ. ವೇದವ್ಯಾಸ ಕಾಮತ್ ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಸಭಾ ಸಭಾಧ್ಯಕ್ಷರಾದ ಸನ್ಮಾನ್ಯ ಯು. ಟಿ. ಖಾದರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ,ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ,ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ , ಉದ್ಯಮಿಗಳಾದ ಡಾ. ಕೆ ಪ್ರಕಾಶ್ ಶೆಟ್ಟಿ , ಕಿಶೋರ್ ಆಳ್ವ ಸೇರಿದಂತೆ ವಿವಿಧ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತಿಯಲ್ಲಿ ಇರಲಿದ್ದಾರೆ.
ಕಳೆದ ಬಾರಿಯ ಕಂಬಳದಲ್ಲಿ ಸುಮಾರು 150 ಜೊತೆ ಕೋಣಗಳು ವಿವಿಧ ವಿಭಾಗಗಳಲ್ಲಿ ಭಾಗಹಿಸಿದ್ದು, ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಕನಹಲಗೆ, ಹಗ್ಗ ವಿಭಾಗ, ನೇಗಿಲು ವಿಭಾಗ ಹಾಗೂ ಅಡ್ಡ ಹಲಗೆ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಲಿದ್ದು ವಿಜೇತ ಕೋಣಗಳಿಗೆ ಚಿನ್ನದ ಪದಕದೊಂದಿಗೆ ಶಾಶ್ವತ ಫಲಕವನ್ನು ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಸದಸ್ಯರಾದ ಸುಧಾಕರ ಶೆಟ್ಟಿ , ಅನಿಲ್ ಜೆ. ಶೆಟ್ಟಿ ಮನ್ಕುತೋಟಗುತ್ತು, ಮಾಜಿ ಕಾರ್ಪೋರೇಟರ್ ಟಿ. ಪ್ರವೀಣ್ ಚಂದ್ರ ಆಳ್ವ, ವೀಣಾ ಮಂಗಳ, ಜೆ.ನಾಗೇಂದ್ರ ಕುಮಾರ್ ,ಸಂದೀಪ್ ಶೆಟ್ಟಿ , ಸಂತೋಷ್ ಆಳ್ವ,ನಿಶಾನ್ ಪೂಜಾರಿ ಸಹಿತ ಇನ್ನಿತ್ತರರು ಉಪಸ್ಥಿತರಿದ್ದರು .