ಮಂಗಳೂರು : ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ವತಿಯಿಂದ ನಗರದ ಉಳ್ಳಾಲದಲ್ಲಿ ಏಳು ದಿನಗಳ ಕಾಲ ಬೃಹತ್ ಕಮ್ಯುನಿಟಿ ಫೆಸ್ಟ್ ನಡೆಯಲಿದೆ. ಯುವ ನಾಯಕತ್ವ, ವೃತ್ತಿ ಮಾರ್ಗದರ್ಶನ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜನವರಿ 26ರಿಂದ ಫೆ:01 ರ ತನಕ ಏಳು ದಿನಗಳ ವಿವಿಧ ಕ್ರೀಡಾಕೂಟಗಳ ಜೊತೆಗೆ ಉದ್ಯೋಗ ಮೇಳ, ರಕ್ತದಾನ ಶಿಬಿರ ಹಾಗೂ ಆಹಾರ ಮೇಳ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸಿರಾಜ್ ಎರ್ಮಾಳ್ ತಿಳಿಸಿದರು.
ಅವರು ನಗರದ ಪೋರಂ ಮಾಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ,ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಷನ್ (ಯುಇಎ) ಕ್ರೀಡೆಗಳ ಮೂಲಕ ಮುಸ್ಲಿಂ ಸಮುದಾಯದ ಸಬಲೀಕರಣ ಮತ್ತು ಅಭಿವೃದ್ಧಿಯತ್ತ ಕೊಂಡುಹೋಗುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದು, ಎಲ್ಲಾ ವಿಧದ ಕ್ರೀಡಾಪಟುಗಳನ್ನು ಸಿದ್ಧಪಡಿಸಿ, ಸ್ಪರ್ಧಾತ್ಮಕ ಮಟ್ಟದಲ್ಲಿ ಭಾಗವಹಿಸಲು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಭಾರತೀಯ ಸೊಸೈಟಿ ಕಾಯ್ದೆಯಡಿ ನೋಂದಾಯಿತವಾದ ಈ ಸಂಸ್ಥೆ ಕರ್ನಾಟಕದಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಬೆಳೆಸಲು ಶ್ರಮಿಸುತ್ತಿರುವುದಲ್ಲದೇ ಕ್ರೀಡಾ ಕ್ಷೇತ್ರದಲ್ಲಿ ಪ್ರಮುಖ ಧ್ವನಿಯಾಗಿ ಹೊರಹೊಮ್ಮಲು ಸಂಸ್ಥೆಯ ಕಾರ್ಯಾಚರಿಸುತ್ತಿದೆ. ಕ್ರೀಡಾಪಟುಗಳ ಜೀವನದಲ್ಲಿ ಕಾರ್ಯಬದ್ಧ ಒಕ್ಕೂಟವನ್ನು ನಿರ್ಮಿಸಿ, ಬೆಳೆಸಿ, ಮುನ್ನಡೆಸುವ ಗುರಿ ಇಟ್ಟುಕೊಂಡಿರುವ ಯುಇಎ ಸಂಸ್ಥೆಯು ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ಚೆಸ್, ಕ್ಯಾರಂ, ಟೇಬಲ್ ಟೆನ್ನಿಸ್, ಖೋ-ಖೋ, ತ್ರೋ ಬಾಲ್, ಕುಸ್ತಿ, ಕರಾಟೆ, ಜುಡೋ, ಓಟ, ಜಂಪಿಂಗ್ ಹಾಗೂ ಸ್ಟೇಟಿಂಗ್ ಮುಂತಾದ ವಿವಿಧ ಕ್ರೀಡಾಪಟುಗಳ ಪುರೋಗತಿಗಾಗಿ ಶ್ರಮಿಸುತ್ತಿದೆ ಎಂದರು.
ಜ:26ರಿಂದ ಆರಂಭಗೊಂಡು ಫೆ:1ರ ತನಕ 7 ದಿನಗಳ ಕಾಲ ನಡೆಯುವ ಕಮ್ಯುನಿಟಿ ವೆಸ್ಟ್ ನಲ್ಲಿ ಕ್ರಿಕೆಟ್, ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯಾಟ, ಉದ್ಯೋಗ ಮೇಳ, ವುಡ್ ಫೆಸ್ಟಿವಲ್, ರಕ್ತದಾನ ಶಿಬಿರ ಕೂಡ ಒಳಗೊಂಡಿದೆ. ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ, ಉಡುಪಿ, ಹಾಗೂ ಕಾಸರಗೋಡು,ಭಟ್ಕಳ ಸೇರಿದಂತೆ ವಿವಿಧ ಪ್ರದೇಶಗಳ ಪ್ರತಿಭಾನ್ವಿತ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ ಬಲಿಷ್ಟ ಆಟಗಾರರನ್ನೊಳಗೊಂಡ ವಿವಿಧ ತಂಡಗಳು ಲೀಗ್ ಮಾದರಿಯ ಪಂದ್ಯಾಕೂಟದಲ್ಲಿ ಪೈಪೋಟಿ ನಡೆಸಲಿದೆ ಮತ್ತು ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಮುಂದಿನ ದಿನಗಳಲ್ಲಿ ಉತ್ತಮ ತರಬೇತುಗಾಗಿ ಯುಇಎ ಸಂಸ್ಥೆಯು ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದರು.
ಜ: 26ರಂದು ಸಂಜೆ 4 ಗಂಟೆಗೆ ಉಳ್ಳಾಲದಲ್ಲಿ ಎಲ್ಲಾ ಕ್ರೀಡಾಪಟುಗಳ ಪಥ ಸಂಚಲನ ಹಾಗೂ ಮೆರವಣಿಗೆಯೊಂದಿಗೆ ಆರಂಭಗೊಂಡು ಉಳ್ಳಾಲದ ಸೀ ಗೌಂಡ್ ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ವಿವಿಧ ರಾಜಕೀಯ, ಸಾಮಾಜಿಕ ಕ್ಷೇತ್ರದ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಸ್ಪೀಕರ್ ಇಲೆವನ್ ಹಾಗೂ ಕಮಿಷನರ್ ಇಲೆವೆನ್ಸ್ ತಂಡಗಳ ವಿರುದ್ಧ ಪ್ರದರ್ಶನ ಕ್ರಿಕೆಟ್ ವಂದ್ಯಾಟ ನಡೆಯಲಿದೆ. ತದನಂತರದಲ್ಲಿ ಕ್ರಿಕೆಟ್ ಪಂದ್ಯಾಕೂಟ ಆರಂಭಗೊಳ್ಳಲಿದೆ ಎಂದರು.
ರಾಷ್ಟ್ರ ಮಟ್ಟದ ಆಟಗಾರರ ಮೆರುಗು:
ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಲವಾರು ಕ್ರೀಡಾಪಟುಗಳು ಭಾಗವಹಿಸಲಿದ್ದು, ಟೆನ್ನಿಸ್ ಕ್ರಿಕೆಟ್ ನಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಉಸ್ಮಾನ್ ಪಟೇಲ್, ಸಲೀಂ ಮೈಟಿ ಸೇರಿದಂತ ವಿವಿಧ ಆಟಗಾರರು ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಜ:26 ರಂದು ಸೀ ಗೌಂಡ್ ನಲ್ಲಿ ವಿಭಿನ್ನ ರೀತಿಯ ಏರ್ ಷೋ ಆಯೋಜನೆ ಮಾಡಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಇಮ್ತಿಯಾಝ್ ಹಜಾಜ್, ಗಫೂರ್ ಫರಂಗಿಪೇಟೆ,ಶರೀಫ್ ಸಲ್ಮಾರ, ಸಿರಾಜ್ ಪುತ್ತೂರು, ಸಿದ್ದಿಕ್ ಉಳ್ಳಾಲ್, ಇಮ್ತಿಯಾಜ್ ಉಳ್ಳಾಲ,ಕಾಜುದ್ದೀನ್,ಸಲೀಂ ಅಬ್ಬಾಸ್,ರಮೀಜ್ ಪಡುಬಿದ್ರೆ,ಇರ್ಫಾನ್, ಶರೀಫ್ ವಳಾಲ್, ಮುಂತಾದವರು ಉಪಸ್ಥಿತರಿದ್ದರು.