ಉಡುಪಿ : ಉಡುಪಿಯ ಪವಿತ್ರ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ಉನ್ನತ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿಗಳು ಪರ್ಯಾಯ ಮೆರವಣಿಗೆಯನ್ನು ಗೌರವಿಸಲು ಭಗವಧ್ವಜವನ್ನು ಹಿಡಿದದ್ದನ್ನೇ ನೆಪವಾಗಿಟ್ಟುಕೊಂಡು, ಅವರ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ನೀಡಿರುವ ಕಾಂಗ್ರೆಸ್ ಕಾನೂನು ಘಟಕದ ಕ್ರಮ ಅಪ್ಪಟ ಹಿಂದೂ ವಿರೋಧಿ ನೀತಿ ಮತ್ತು ಓಲೈಕೆ ರಾಜಕಾರಣದ ಪರಮಾವಧಿಯಾಗಿದೆ. ಶತಮಾನಗಳ ಇತಿಹಾಸವಿರುವ ಉಡುಪಿಯ ಈ ಸಾಂಸ್ಕೃತಿಕ ಪರಂಪರೆಯಲ್ಲಿ ಜಿಲ್ಲೆಯ ಶಿಸ್ತುಬದ್ಧ ಆಡಳಿತದ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿಗಳು ಪಾಲ್ಗೊಳ್ಳುವುದು ಮತ್ತು ಸನಾತನ ಧರ್ಮದ ತ್ಯಾಗ-ಸೇವೆಯ ಸಂಕೇತವಾದ ಭಗವಧ್ವಜವನ್ನು ಗೌರವಿಸುವುದು ನಮ್ಮ ನಾಡಿನ ಸಂಪ್ರದಾಯದ ಭಾಗವೇ ಹೊರತು ಅದು ಎಂದಿಗೂ 'ಸೇವಾ ನಿಯಮಗಳ ಉಲ್ಲಂಘನೆ'ಯಾಗಲಾರದು. ಇದೇ ಕಾಂಗ್ರೆಸ್ ಸರ್ಕಾರವು ಮೈಸೂರು ದಸರಾದಂತಹ ಪವಿತ್ರ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಲು ಅನ್ಯ ಧರ್ಮದ ಲೇಖಕಿಯನ್ನು ಆಹ್ವಾನಿಸಿದಾಗ ಇವರ 'ಜಾತ್ಯತೀತತೆ' ಮತ್ತು 'ಸಂವಿಧಾನ' ಎಲ್ಲಿ ಅಡಗಿತ್ತು? ಶ್ರದ್ಧಾ ಭಕ್ತಿಗಳಿಂದ ನಡೆಯುವ ಚಾಮುಂಡಿ ಬೆಟ್ಟದ ಧಾರ್ಮಿಕ ವಿಧಿವಿಧಾನಗಳಿಗೆ ಅನ್ಯ ಧರ್ಮೀಯರನ್ನು ಕರೆತರುವುದು ಇವರಿಗೆ ಹೆಮ್ಮೆಯ ವಿಷಯವಾಗುತ್ತದೆ, ಆದರೆ ಪರ್ಯಾಯದಲ್ಲಿ ಭಗವಧ್ವಜ ಹಿಡಿಯುವುದು ಮಾತ್ರ ಇವರಿಗೆ ಮಹಾಪರಾಧವಾಗಿ ಕಾಣುತ್ತದೆ ಎನ್ನುವುದೇ ಇವರ ದ್ವಂದ್ವ ನೀತಿಗೆ ಸಾಕ್ಷಿ. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಪದೇ ಪದೇ ಕೆಣಕುತ್ತಿರುವ, ಪ್ರಾಮಾಣಿಕ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸನಾತನ ಸಂಸ್ಕೃತಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್‌ನ ಈ ಧೋರಣೆಯನ್ನು ಪ್ರತಿಯೊಬ್ಬ ಸ್ವಾಭಿಮಾನಿ ಹಿಂದೂ ಒಕ್ಕೊರಲಿನಿಂದ ಖಂಡಿಸಬೇಕಿದೆ, ಮತದಾನದ ಸಮಯದಲ್ಲಿ ಇಂತಹ ಸನಾತನ ವಿರೋಧಿ ಕೃತ್ಯಗಳನ್ನು ನೆನಪಿಟ್ಟುಕೊಳ್ಳುವುದು ಅತ್ಯಗತ್ಯ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.