image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಗರದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ದ.ಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ, ಸಾರ್ವಜನಿಕರ ಸಭೆ

ನಗರದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ದ.ಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ, ಸಾರ್ವಜನಿಕರ ಸಭೆ

ಮಂಗಳೂರು: ಸೆಂಟ್ರಲ್‌ನಿಂದ ಬಂದರ್ ಗೂಡ್ಸ್ ಶೆಡ್ ಗೆ ಹೋಗುವ ಖಾಲಿ ರೈಲುಗಳ ಓಡಾಟದಿಂದಾಗಿ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗುವುದು ಸೇರಿದಂತೆ ನಗರದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ದ.ಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ, ಸಾರ್ವಜನಿಕರ ಸಭೆ ನಡೆಯಿತು. 

ವಿಷಯ ಪ್ರಸ್ತಾಪಿಸಿದ ಶಾಸಕ ವೇದವ್ಯಾಸ್ ಕಾಮತ್, ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ಗೇಟ್‌ ಮೂಲಕ ದಿನಕ್ಕೆ ಕನಿಷ್ಠ 16 ಸಲವಾದರೂ ಖಾಲಿ ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲುಗಳು ಬಂದರ್ ಯಾರ್ಡ್ ಗೆ ಹೋಗುವುದರಿಂದ ಪ್ರತೀ ಬಾರಿ ಕನಿಷ್ಠ 15 ರಿಂದ 20 ನಿಮಿಷ ಟ್ರಾಫಿಕ್ ಜಾಮ್ ಉಂಟಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಉದ್ಯೋಗಿಗಳು, ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು ತೊಂದರೆಗೀಡಾಗುತ್ತಿವೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ನನಗೆ ದೂರು ನೀಡಿದ್ದು, ಅದನ್ನು ಖುದ್ದು ಪರಿಶೀಲಿಸಿ ಸಂಸದರ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗಿದೆ ಎಂದರು. 

ಜಿಲ್ಲಾಧಿಕಾರಿಗಳಾದ ದರ್ಶನ್ ಎಚ್.ವಿ ಮಾತನಾಡಿ, ರೈಲು ಬರುವ ಸಮಯವನ್ನು ಆಯಾ ಪ್ರದೇಶಗಳಲ್ಲಿ ದೊಡ್ಡ ಪರದೆಯಲ್ಲಿ ಪ್ರದರ್ಶಿಸಿದರೆ ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಸದ ಬ್ರಿಜೇಶ್ ಚೌಟ ಮಾತನಾಡಿ ಸದ್ಯಕ್ಕೆ ತಾತ್ಕಾಲಿಕವಾಗಿ ಬೆಳಿಗ್ಗೆ ಮತ್ತು ಸಂಜೆಯ ಪೀಕ್ ಸಮಯದಲ್ಲಿ ರೈಲು ಸಂಚಾರ ತಪ್ಪಿಸಬೇಕು. ಮುಂದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳು ಸಮನ್ವಯತೆಯಿಂದ ಸಮಗ್ರ ವರದಿ ತಯಾರಿಸಬೇಕು ಹಾಗೂ ಅದನ್ನು ಪರಿಶೀಲನೆ ನಡೆಸುವ ಬಗ್ಗೆ ಸೂಚನೆ ನೀಡಿದರು.

ಹೊಯಿಗೆ ಬಜಾರ್ ಲೆವೆಲ್ ಕ್ರಾಸಿಂಗ್ ಬಳಿಯೂ ಇದೇ ಪರಿಸ್ಥಿತಿಯಿದ್ದು ಇಲ್ಲಿರುವ ಯಾರ್ಡನ್ನು ಸ್ಥಳಾಂತರಿಸುವ ಬಗ್ಗೆ, ಬೇರೆಡೆ ಸೂಕ್ತ ಪ್ರದೇಶ ನಿಗದಿಗೊಳಿಸುವ ಬಗ್ಗೆ, ಡಿ.ಆರ್.ಎಂ ಜೊತೆ ಮಾತುಕತೆ ನಡೆಸಿ ರಸ್ತೆ ಅಗಲ ಮಾಡಿ ಡಬಲ್ ಗೇಟ್ ನಿರ್ಮಿಸುವ ಬಗ್ಗೆಯೂ ಚರ್ಚೆ ನಡೆಯಿತು.

ಇದೇ ವೇಳೆ ನೂಜಿ ಅಂಡರ್ ಪಾಸ್, ಕಂಡೇವು ಹಾಗೂ ಅಳಪೆ ಮಠದ ಬಳಿ ಓವರ್ ಪಾಸ್, ಎಕ್ಕೂರು ಡ್ರೈನೇಜ್ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪವಾಯಿತು.

ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಪಾಲಿಕೆ ಹಿರಿಯ ಅಭಿಯಂತರರಾದ ನರೇಶ್ ಶೆಣೈ, ಪ್ರಮುಖರಾದ ಧರ್ಮರಾಜ್, ರವಿಶಂಕರ್ ಮಿಜಾರು, ನಿತಿನ್ ಕುಮಾರ್, ಉಮಾನಾಥ್ ಕೋಟೆಕಾರ್, ಬಿಜೆಪಿ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳಾದ, ಭರತ್ ಕುಮಾರ್ ಸೂಟರ್ ಪೇಟೆ, ಶೈಲೇಶ್ ಶೆಟ್ಟಿ, ಶೋಭಾ ಪೂಜಾರಿ, ಸಂದೀಪ್ ಗರೋಡಿ, ಅಜಯ್ ಕುಲಶೇಖರ, ಪಾಲಿಕೆ ಅಧಿಕಾರಿಗಳು, ರೈಲ್ವೆ ಅಧಿಕಾರಿಗಳು, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ