ಮಂಗಳೂರು: ಸುರತ್ಕಲ್ ಹೋಬಳಿ ಬಜೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು 3ನೆ ವಾರ್ಡ್ ಮೂಡುಬಾಳಿಕೆ ಎಂಬಲ್ಲಿ ಕೋಸ್ಟ್ ಗಾರ್ಡ್‌ನಿಂದ ಕಂಪೌಂಡ್ ನಿರ್ಮಾಣ ಕಾಮಗಾರಿಗೆ ಮುಂದಾಗಿದ್ದು, ಇದರಿಂದ ಅಲ್ಲಿನ ಪರಿಶಿಷ್ಟ ಜಾತಿಯ 10 ಕುಟುಂಬಗಳು ರಸ್ತೆ ಇಲ್ಲದೆ ದಿಗಂಧನಕ್ಕೊಳಗಾಗುವ ಭೀತಿಯನ್ನು ಎದುರಿಸುತ್ತಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ,ಕುಟುಂಬಗಳಿಗೆ ಆಸರೆಯಾಗಿದ್ದ ಏಕ ಮಾತ್ರ ರಸ್ತೆಯನ್ನು ಭಾರತೀಯ ಕೋಸ್ಟ್‌ಗಾರ್ಡ್‌ನವರು ಕಂಪೌಂಡ್ ನಿರ್ಮಾಣಕ್ಕೆ ಮುಂದಾಗಿರುವುದರಿಂದ ದಿನನಿತ್ಯ ಸಂಚಾರಕ್ಕೆ ಈ ಕುಟುಂಬಗಳು ಪರದಾಡುವಂತಾಗಿದೆ. ಈ ಬಗ್ಗೆ ಸಂಘಟನೆಯ ನೇತೃತ್ವದಲ್ಲಿ ಈಗಗಾಲೇ ಸಂಸದರು, ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ನ್ಯಾಯ ದೊರಕದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದರು.
ಮೂಡುಬಾಳಿಕೆಯಲ್ಲಿ 10 ಪರಿಶಿಷ್ಟ ಜಾತಿಯ ಕುಟುಂಬಗಳು ಸುಮಾರು 70 ವರ್ಷಗಳಿಂದ ವಾಸಿಸುತ್ತಿದ್ದಾರೆ. 1995ರಲ್ಲಿ ಈ ಮನೆಗಳಿಗೆ ಹಕ್ಕು ಪತ್ರ ದೊರಕಿದೆ. ಕುಟುಂಬಗಳು ವಾಸಿಸುತ್ತಿರುವ ಮನೆಗಳ ಸುತ್ತಲೂ ಇರುವ ಜಮೀನು ಖಾಸಗಿಯವರಿಗೆ ಸೇರಿದ್ದಾಗಿದೆ. ಈ ಕುಟುಂಬಗಳು ತಮ್ಮ ದೈನಂದಿನ ಕೆಲಸ ಕಾರ್ಯ, ವಿದ್ಯಾಭ್ಯಾಸ ಹಾಗೂ ಇತರ ವಿಚಾರಗಳಿಗೆ ಹೋಗಲು ಸರ್ವೆ ನಂ. 116/7 ಕ್ಕೆ ತಾಗಿಕೊಂಡಿರುವ ಕಾಲುದಾರಿ ಮತ್ತು ಕಚ್ಚಾ ರಸ್ತೆಯನ್ನು ಅವಲಂಬಿಸಿರುತ್ತಾ. ತಲಾ 2.5 ಸೆಂಟ್ಸ್ ಜಾಗದಲ್ಲಿರುವ ಈ 10 ಕುಟುಂಬಗಳ ಮನೆಗಳವರು ಈ ರಸ್ತೆಗಳಲ್ಲಿಯೇ ತಮ್ಮ ಮನೆಗಳಿಗೆ ಬೇಕಾದ ವಸ್ತುಗಳನ್ನು, ರಿಕ್ಷಾ ಅಥವಾ ಟೆಂಪೋ ಮೂಲಕ ಸಾಗಿಸುತ್ತಿದ್ದಾರೆ. ತುರ್ತು ಸಂದರ್ಭಗಗಳಲ್ಲಿ ಹಿರಿಯ ನಾಗರಿಕರು ಅಥವಾ ರೋಗಿಗಳನ್ನು ಸಾಗಿಸಲು ಕುಟುಂಬಗಳಿಗೆ ಇರುವ ಏಕೈಕ ರಸ್ತೆ ಇದಾಗಿದೆ. ಮಳೆಗಾಲದಲ್ಲಿ ನೆರೆ ಬಂದಾಗ ಈ ಪ್ರದೇಶ ಸಂಪೂರ್ಣ ಜಲಾವೃತವಾಗುತ್ತದೆ ಎಂದು ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ಹೇಳಿದರು.