ಮಂಗಳೂರು : ವಿದ್ಯಾನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಗಳೂರು ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಮಾದಕ ವಸ್ತುಗಳ ಜಾಲ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದರೆ, ಇತ್ತೀಚಿನ ತಿಂಗಳುಗಳಲ್ಲಿ ಮಂಗಳೂರು ಪೊಲೀಸರು ಕೈಗೊಂಡಿರುವ ಕಠಿಣ ಕ್ರಮಗಳು ಶ್ಲಾಘನೀಯವಾಗಿವೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತಿಳಿಸಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳು ಸುಲಭವಾಗಿ ಲಭ್ಯವಾಗುತ್ತಿದ್ದ ಹಿನ್ನೆಲೆಯಲ್ಲಿ ಅನೇಕ ವಿದ್ಯಾರ್ಥಿಗಳು ವ್ಯಸನದ ಚಟಕ್ಕೆ ಒಳಗಾಗುತ್ತಿದ್ದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮಂಗಳೂರು ಪೊಲೀಸರು ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಸಂಬಂಧಿತ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಅಲ್ಲದೆ, ವಿವಿಧ ಕಾಲೇಜುಗಳಲ್ಲಿ ಅನಿರೀಕ್ಷಿತವಾಗಿ ವಿದ್ಯಾರ್ಥಿಗಳ ಮಾದಕ ವಸ್ತುಗಳ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಎಚ್ಚರಿಕೆ ಮೂಡಿಸಿರುವುದು ಸಮಾಜದ ಸ್ವಾಸ್ಥ್ಯ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮವಾಗಿದೆ ಎಂದು ಎಬಿವಿಪಿ ಅಭಿಪ್ರಾಯಪಟ್ಟಿದೆ. ಮಂಗಳೂರು ಪೊಲೀಸರು ಮಾದಕ ವಸ್ತುಗಳ ವಿರುದ್ಧ ಕೈಗೊಂಡಿರುವ ಈ ಹೋರಾಟಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಪೂರ್ಣ ಬೆಂಬಲ ನೀಡುತ್ತದೆ ಹಾಗೂ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದು ಎಬಿವಿಪಿ ಮಂಗಳೂರು ಜಿಲ್ಲಾ ಸಂಚಾಲಕ ಶ್ರೀಜಿತ್ ರೈ ಬೆಟ್ಟಂಪಾಡಿ ಹೇಳಿದ್ದಾರೆ.