ಮೂಡುಬಿದಿರೆ : ‘ಡಾ.ಎಂ. ಮೋಹನ ಆಳ್ವ ನೇತೃತ್ವದ ಆಳ್ವಾಸ್ ತಂಡವು ಮಾದರಿಯಾಗಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸುವಷ್ಟು ಸಶಕ್ತವಾಗಿದೆ. ಈ ಕ್ರೀಡಾಕೂಟ ಯಶಸ್ವಿಯಾಗಿದ್ದು, ಮೂಡುಬಿದಿರೆಗೆ ಇನ್ನಷ್ಟು ಕಾರ್ಯಕ್ರಮಗಳು ಬರಲಿ ಎಂದು ಶಾಸಕ ಉಮಾನಥ ಕೋಟ್ಯಾನ್ ಹೇಳಿದರು. ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ ಸಮಾರೋಪ ಮತ್ತು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆನರಾ ಬ್ಯಾಂಕ್ ಪ್ರಧಾನ ಪ್ರಬಂಧಕ ಮಂಜುನಾಥ ಬಿ. ಸಿಂಗ್ ಮಾತನಾಡಿ, ‘ಆಳ್ವಾಸ್ ಹಾಗೂ ಕೆನರಾ ನಂಟು 40 ವರ್ಷಗಳಿಂದ ಇದೆ. ಆರೋಗ್ಯಕರ ದೇಹವೇ ಮಾನಸಿಕ ಆರೋಗ್ಯಕ್ಕೆ ಕಾರಣ. ಎಲ್ಲರೂ ಆರೋಗ್ಯಕರ ಜೀವನ ನಡೆಸಿ’ ಎಂದು ಹಾರೈಸಿದರು. ಕ್ರೀಡಾಕೂಟದ ವೀಕ್ಷಕರಾದ ಡಾ. ಯು.ವಿ. ಶಂಕರ್ ಮಾತನಾಡಿ, `ಕ್ರೀಡಾ ಕೂಟದ ಯಶಸ್ಸಿಗೆ ಆಳ್ವಾಸ್ ತಂಡಕ್ಕೆ ಅಭಿನಂದನೆ. ಇದು ಆಳ್ವಾಸ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಾಧನೆ’ ಎಂದರು. ‘ಕೇವಲ ಈ ಕ್ರೀಡಾಕೂಟ ಮಾತ್ರವಲ್ಲ, ಒಟ್ಟಾರೆ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿರುವ ಡಾ.ಎಂ. ಮೋಹನ ಆಳ್ವ ಅವರಿಗೆ ಭಾರತೀಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಧನ್ಯವಾದ ಸಲ್ಲಿಸುತ್ತದೆ’ ಎಂದರು. ‘ಇದು ನಾನು ನೋಡಿದ ಅತ್ಯುತ್ತಮ ಕ್ರೀಡಾಕೂಟ. ಅಥ್ಲೀಟ್‌ಗಳು ಬಹುತೇಕ ಬಡವರಾಗಿರುತ್ತಾರೆ. ಅವರಿಗೆ ಆಳ್ವರು ಘೋಷಿಸಿದ ನಗದು ಬಹುಮಾನ ದೊಡ್ಡ ಬೆಂಬಲ’ ಎಂದು ಶ್ಲಾಘಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಎಂಸಿಎಸ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಮೀನಾಕ್ಷಿ ಆಳ್ವ ಉಪಸ್ಥಿತರಿದ್ದರು.