ಮಂಗಳೂರು: ಪ್ರವಾಸೋದ್ಯಮ ಇಲಾಖೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ 'ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ 2026'ನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಗರದ ಖಾಸಗಿ ಹೊಟೇಲ್ ನಲ್ಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕರಾವಳಿ ಜ್ಞಾನ ಸಂಪತ್ತಿನ ಪರ್ವತ, ದೈವ ದೇವರ ಶಕ್ತಿಕೇಂದ್ರ, ವ್ಯಾಪಾರಿಗಳ ನಿಧಿ, ಪ್ರವಾಸಿಗರ ಸ್ವರ್ಗ, ವಿಶೇಷ್ಟ ಕಲೆ-ಸಂಸ್ಕೃತಿಗಳ ತವರೂರು ಆದರೂ ಪ್ರವಾಸೋದ್ಯಮದಲ್ಲಿ ಹಿಂದೆ ಉಳಿದಿದೆ. ಹಾಗಾಗಿ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯ ಅಗತ್ಯವಿದೆ. ಈಗಾಗಲೇ ರಾಜ್ಯ ಪ್ರವಾಸೋದ್ಯಮ ನೀತಿಯನ್ನು ಸಿದ್ಧಪಡಿಸಲಾಗಿದ್ದು, ಕರಾವಳಿಯ ಕುರಿತ ಚರ್ಚಸಿದ ಬಳಿಕ ಅದನ್ನು ಅಂತಿಮ ಪಡಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ಮೊದಲ ಹಂತದ ಸಭೆ ಆಯೋಜಿಸಲಾಗಿದೆ ಎಂದರು. ಮಂಗಳೂರಿನ ಯುವಜನತೆ ಬುದ್ಧಿವಂತರು ಮತ್ತು ಪ್ರಜ್ಞಾವಂತರಾಗಿದ್ದಾರೆ. ಆದರೆ ಇಲ್ಲಿ ಸರಿಯಾದ ಅವಕಾಶಗಳಿಲ್ಲದೆ ಉದ್ಯೋಗಕ್ಕಾಗಿ ಮುಂಬೈ, ದುಬೈ ಮತ್ತು ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ನಮ್ಮ ಗುರಿ ಈ ವಲಸೆಯನ್ನು ತಪ್ಪಿಸುವುದಾಗಿದೆ. ವಿದೇಶಗಳಲ್ಲಿರುವ ಇಲ್ಲಿನ ಉದ್ಯಮಿಗಳು ತಮ್ಮ ಸ್ವಂತ ಊರಿಗೆ ಮರಳಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಅವರಿಗೆ ಪೂರಕವಾದ ವಾತಾವರಣ ನಿರ್ಮಿಸಿದರೆ ಸ್ಥಳೀಯವಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ' ಎಂದು ಡಿ.ಕೆ. ಶಿವಕುಮಾರ್ ಆಶಯ ವ್ಯಕ್ತಪಡಿಸಿದರು.
ಕರಾವಳಿ ಭಾಗದ ಅಭಿವೃದ್ಧಿಗಾಗಿಯೇ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಅಧಿಕಾರಿಗಳು, ಉದ್ಯಮಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. 'ಇಲ್ಲಿನ ಶಾಸಕರು ಕೂಡ ಪಕ್ಷಭೇದ ಮರೆತು ಅಭಿವೃದ್ಧಿಗೆ ಆಸಕ್ತಿ ತೋರಿದ್ದಾರೆ. ಪ್ರವಾಸೋದ್ಯಮ ಬೆಳೆಯಬೇಕಾದರೆ ಮೂಲಸೌಕರ್ಯ ಮುಖ್ಯ. ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಫೈವ್ ಸ್ಟಾರ್ ಹೋಟೆಲ್‌ಗಳ ಕೊರತೆಯಿದೆ, ಅದನ್ನು ನೀಗಿಸಲು ಖಾಸಗಿ ಸಹಭಾಗಿತ್ವದ (PPP) ಅಗತ್ಯವಿದೆ ಎಂದು ಹೇಳಿದರು. ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಮಂಕಾಳ ವೈದ್ಯ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಸುನೀಲ್ ಕುಮಾರ್, ಡಾ| ವೈ. ಭರತ್ ಶೆಟ್ಟಿ, ಯಶ್ ಪಾಲ್ ಸುವರ್ಣ, ರಾಜೇಶ್ ನಾಯ್ಕ್, ಕಿರಣ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ರಾಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿʼಸೋಜಾ, ಕಿಶೋರ್ ಕುಮಾರ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪ್ರವಾಸೋದ್ಯಮ ಪಾಲುದಾರರು, ಉದ್ದಿಮೆದಾರರು, ಭಾಗವಹಿಸಿದ್ದರು.