image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜ.4ರಂದು ಕುಲಾಲ ಕುಂಬಾರರ ಯುವ ವೇದಿಕೆಯಿಂದ ಪುರಭವನದಲ್ಲಿ 'ಕುಂಭ ಕಲಾವಳಿ'

ಜ.4ರಂದು ಕುಲಾಲ ಕುಂಬಾರರ ಯುವ ವೇದಿಕೆಯಿಂದ ಪುರಭವನದಲ್ಲಿ 'ಕುಂಭ ಕಲಾವಳಿ'

ಮಂಗಳೂರು: ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದ.ಕ. ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೆಬಲ್‌ ಸೇವಾ ಟ್ರಸ್ಟ ಸಹಯೋಗದಲ್ಲಿ ಜ.4ರಂದು 'ಕುಂಭ ಕಲಾವಳಿ ಕಾರ್ಯಕ್ರಮ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ನಡೆಯಲಿದ್ದು,  ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ಅಶಕ್ತರಿಗೆ ನೆರವು ಮೊದಲಾದ ಸಾಮಾಜಿಕ ಚಟುವಟಿಕೆಗಳು ನಡೆಯಲಿವೆ ಎಂದು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ, ರಾಜ್ಯದ ವಿವಿಧ ಭಾಗಗಳಿಂದ ಸಮುದಾಯದ ಸುಮಾರು 2ರಿಂದ 3 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. 

ಬೆಳಗ್ಗೆ 8.30ಕ್ಕೆ ವೈಷ್ಣವಿ ಕ್ಷೇತ್ರ ಮುಳಿಯದ ಶಿವಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಲಿದ್ದು, ಬಳಿಕ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಸಾಂಸ್ಕೃತಿಕ ಸ್ಪರ್ಧೆಗೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಚಾಲನೆ ನೀಡಲಿದ್ದಾರೆ. ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ, ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು  ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಅನಿಲ್‌ದಾಸ್‌ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಮಂದಿ ಸಾಧಕರಿಗೆ ಕುಲಾಲ ಸಿಂಧೂರ ಪ್ರಶಸ್ತಿ ಪ್ರದಾನ ನಡೆಯಲಿದೆ. ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್‌ನ ಸಹಯೋಗದಲ್ಲಿ ಸೇವಾಂಜಲಿ ಹೆಸರಿನಲ್ಲಿ ಫಲಾನುಭವಿಗಳಿಗೆ ಸಹಾಯ ಹಸ್ತ ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಪ್ರೋತ್ಸಾಹ ಧನ, ವೈದ್ಯಕೀಯ ನೆರವು, ಅಶಕ್ತರಿಗೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಹೇಳಿದರು.

ಅವಿಭಜಿತ ದ.ಕ. ಜಿಲ್ಲೆಯ ಕುಲಾಲ ಸಂಘಗಳ ಯುವ ವೇದಿಕೆಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಲಿದ್ದು, ವಿಜೇತ ತಂಡಕ್ಕೆ ಪ್ರಥಮ 51,001 ರೂ., ದ್ವಿತೀಯ 31001 ರೂ., ತೃತೀಯ 21001 ರೂ. ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ರಾಜ್ಯಾಧ್ಯಕ್ಷ ಸುಧಾಕರ ಸಾಲ್ಯಾನ್, ವಿಭಾಗೀಯ ಅಧ್ಯಕ್ಷ ಸುಕುಮಾರ ಬಂಟ್ವಾಳ, ಕಾರ್ಯಕ್ರಮ ಸಂಯೋಜಕ ರಾಧಾಕೃಷ್ಣ ಬಂಟ್ವಾಳ, ಸಮಿತಿ ಸಂಚಾಲಕ ಜಯರಾಜ್ ಪ್ರಕಾಶ್, ಜಯಂತ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ