ಉಡುಪಿ: ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗಾಗಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ವತಿಯಿಂದ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಪ್ಪುಪಟ್ಟಿ ಧರಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸೋಮವಾರ 15ನೇ ದಿನಕ್ಕೆ ಕಾಲಿರಿಸಿದೆ. ಈ ಸಂದರ್ಭದಲ್ಲಿ ಮಾತಾಡಿದ ಒಕ್ಕೂಟದ ಸಂಚಾಲಕ ಕೆ. ಪುತ್ರನ್ ಅವರು, ಕೊರಗ ಸಮುದಾಯದ ಯುವ ಜನರಲ್ಲಿ ಈಗಲೂ, ಹಿಂಜರಿಕೆ. ಕೀಳರಿಮೆ ಇದ್ದು ಅವರು ಕೆಲವೊಂದು ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿಲ್ಲ. ಈ ಕಾರಣಕ್ಕೆ ಕೊರಗರಿಗೆ ನೇರ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕೊರಗ ಸಮುದಾಯದ ಯುವಕರು ಪದವಿ ಸಹಿತ ಉನ್ನತ ವಿದ್ಯಾವಂತರಾಗಿದ್ದರೂ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ನೇರ ನೇಮಕಾತಿ ಪಡೆದವರಿಗೆ ಉತ್ತಮ ಶಿಕ್ಷಣ ನೌಕರಿ ಸಿಗಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹಿಂದೆ ಪ್ರತಿಭಟನೆ ನಡೆಸಿದ್ದಾಗ ನೇಮಕಾತಿ ನಡೆಸುವ ಭರವಸೆಯನ್ನು ಸರಕಾರ ನೀಡಿದ್ದರೂ ಅದು ಇದುವರೆಗೂ ಈಡೇರಿಲ್ಲ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯುವುದು ಹೇಗೆ ಎಂಬುದೇ ಕೊರಗ ಸಮುದಾಯದವರಿಗೆ ತಿಳಿದಿಲ್ಲ. ಖಾಸಗಿಯವರೂ ಕೆಲಸ ಕೊಡುವುದಿಲ್ಲ. ಸರ್ಕಾರಿ ಉದ್ಯೋಗವೂ ಸಿಗುವುದಿಲ್ಲ ಎಂದು ಸಮುದಾಯದ ಪ್ರವೀಣ್ ತಿಳಿಸಿರುವ ಬಗ್ಗೆ ಮಾದ್ಯಮಗಳಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗಾಗಿ ಕೊರಗ ಸಮುದಾಯದ ಬೇಡಿಕೆ ಕುರಿತು ಇಲಾಖಾ ಮಟ್ಟದಲ್ಲಿ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಮತ್ತು ಈ ಮೂಲಕ ಕರಾವಳಿಯ ಮೂಲನಿವಾಸಿಗಳಾದ ಕೊರಗ ಸಮುದಾಯದ ಉನ್ನತಿಗಾಗಿ ಪರಿಣಾಮಕಾರಿ ತುರ್ತು ಸುಧಾರಣೆ ಪ್ರಕ್ರಿಯೆಯನ್ನು ಅನುಷ್ಠಾನಿಸುವಂತೆ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಮನವಿ ಮಾಡಿದ್ದಾರೆ.