ಮಂಗಳೂರು: ರಾಜಕೇಸರಿ ಸೇವಾ ಟ್ರಸ್ಟ್ ಕಳೆದ 13 ವರ್ಷಗಳಿಂದ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಆನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದು ಬಡ ಆಶಕ್ತರಿಗೆ ಮನೆ ನಿರ್ಮಾಣ. ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ಹಾಗೂ ಅನ್ನಿತರ ಸರಿಸುಮಾರು 585 ಸೇವಾ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಸಮಾಜದ ಹಲವಾರು ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಾ ಬಂದಿರುತ್ತದೆ.
ಪ್ರಸ್ತುತ ನಮ್ಮ ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಬಡ ಮಕ್ಕಳ ಆರೋಗ್ಯ, ನೈರ್ಮಲ್ಯ ಮತ್ತು ಹಕ್ಕು ಸಂರಕ್ಷಣೆಯ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ಸ್ವಯಂಪ್ರೇರಿತ ಶ್ರಮದಾನದ ಮೂಲಕ ಶುಚಿತ್ವ ಮತ್ತು ದುರಸ್ತಿಗೊಳಿಸಿ, ನವೀಕರಿಸಿ ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸುವ ವಿನೂತನ ಪರಿಕಲ್ಪನೆಯೊಂದಿಗೆ 'ರಾಜಕೇಸರಿ ಸ್ವಚ್ಚಾಲಯ ಅಭಿಯಾನ " ವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವ್ಯಾಪ್ತಿಯ 15 ಶಾಲೆಗಳ ಶೌಚಾಲಯಗಳನ್ನು ನಮ್ಮ ಸಂಸ್ಥೆಯ ವತಿಯಿಂದ ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸಲಾಗಿದೆ.
ಸಂಸ್ಥೆಯ ಸದಸ್ಯರೆಲ್ಲರೂ ಶ್ರಮಿಕರಾಗಿದ್ದು ಈ ಎಲ್ಲಾ ಸೇವಾ ಚಟುವಟಿಕೆಗಳ ಸಹಾಯಾರ್ಥವಾಗಿ ಭವ್ಯ ಭಾರತದ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ 4 ಜನವರಿ 2026 ರ ಆದಿತ್ಯವಾರದಂದು ಸಮಾಜದ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೃತ್ತಿಪರರ ನಡುವೆ ಒಂದು ದಿನದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ನ ಜಿಲ್ಲಾಧ್ಯಕ್ಷರಾದ ಸಂತೋಷ್ ಕೊಲ್ಯ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಜೊತೆಗೆ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಶಿಬಿರ, ವಿವಿಧ ಇಲಾಖೆಯ ಮಳಿಗೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಗಳನ್ನು ಮಾಡಲಾಗುವುದು
ಸಮಾಜದ 8 ವಿವಿಧ ಶ್ರಮಿಕ ವರ್ಗಗಳ ನಡುವೆ ಪಂದ್ಯಾಟವನ್ನು ಆಯೋಜಿಸಲಾಗಿದ್ದು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಸಮಾರಂಭದಲ್ಲಿ ಇತ್ತೀಚೆಗೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಮಹಿಳಾ ಕಬ್ಬಡ್ಡಿ ವಿಶ್ವಕಪ್ ಪಂದ್ಯಾಟದ ವಿಜೇತ ಭಾರತ ತಂಡದ ಸದಸ್ಯೆ ಕುಮಾರಿ ಧನಲಕ್ಷ್ಮಿ ಪೂಜಾರಿ, ದಕ್ಷಿಣ ಕನ್ನಡ ಲೋಕಸಭಾಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕರ್ನಾಟಕ ವಿಧಾನ ಸಭೆಯ ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ ಖಾದರ್ ಫರೀದ್ ಹಾಗೂ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಾಯಂಕಾಲ 5 ಗಂಟೆಗೆ ಸಾಮಾರೋಪ ಸಮಾರಂಭ ನಡೆಯಲಿದ್ದು ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪಂದ್ಯಾಟದ ವಿಜೇತರಿಗೆ ಟ್ರೋಫಿ ಮತ್ತು ನಗದು ಹಸ್ತಾಂತರಿಸಲಾಗುವುದು ಎಂದರು.
ಕ್ರಿಕೆಟ್ ಪಂದ್ಯಾಟದ ಜೊತೆ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವಾರು ಸೇವಾ ಚಟುವಟಿಕೆಗಳು ನಡೆಯಲಿದ್ದು ಸಾರ್ವಜನಿಕರು ಮತ್ತು ಕ್ರೀಡಾ ಪ್ರೇಮಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲೋಕೇಶ್ ಕುಲಾಲ್, ಸಂದೀಪ್ ಸಾಲಿಯಾನ್,ರತೀಶ್ ರೈ ಎಕ್ಕೂರು,ಚರಣ್ ಶೆಟ್ಟಿ ಮಾಲೇಮಾರ್, ಯೋಗೇಶ್ ರೈ. ಜೆ ಶರತ್ ಕುಮಾರ್ ಯು ಉಪಸ್ಥಿತರಿದ್ದರು.