ಮಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸರಕಾರವು ಅದಾನಿ ಸಂಸ್ಥೆಗೆ ನಿರ್ವಹಣೆ ನೀಡಿದ ಮೇಲೆ ದಿನದಿಂದ ದಿನ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತಿದೆ. ಹೀಗಾಗಿ ಇಲ್ಲಿ ಸಾರ್ವಜನಿಕರಿಗೆ ಮತ್ತು ಟ್ಯಾಕ್ಸಿ ಚಾಲಕರಿಗೆ ಬಹಳಷ್ಟು ತೊಂದರೆಗಳಾಗುತ್ತಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆನ್ ಲೈನ್ ಟ್ಯಾಕ್ಸಿ ಚಾಲಕರ ಸಂಘದ ಗೌರವಾಧ್ಯಕ್ಷ ಬಿ ಕೆ ಇಮ್ತಿಯಾಜ್ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿ, ಕಳೆದ ಕೆಲವು ವರ್ಷಗಳಿಂದ ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ನಮ್ಮ ಸಂಘದ ಸತತ ಹೋರಾಟದ ಫಲವಾಗಿ ಇಲ್ಲಿ ನೀಡಲಾಗಿತ್ತು. ಪಾರ್ಕಿಂಗ್ ಸಿಕ್ಕಿದ ಮೇಲೆ ಈವರೆಗೂ ಅಲ್ಲಿ ಪ್ರತಿನಿತ್ಯ ಅನ್ಯಾಯ, ದಬ್ಬಾಳಿಕೆ ನಡೆಯುತ್ತಲೇ ಇದೆ. ಮಂಗಳೂರಿನಲ್ಲಿ ಆ್ಯಪ್ ಆಧಾರಿತ ರೇಡಿಯೋ ಟ್ಯಾಕ್ಸಿ ಸೇವೆಯಲ್ಲಿ ದುಡಿಯುವ ವಾಹನಗಳು ಸುಮಾರು 250ಕ್ಕೂ ಹೆಚ್ಚು ಇದ್ದರೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇವಲ 10 ವಾಹನಗಳಿಗೆ ಮಾತ್ರ ಪಾರ್ಕಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. 10ಕ್ಕಿಂತ ಹೆಚ್ಚು ವಾಹನಗಳು ಅಲ್ಲಿಗೆ ಬಂದರೆ ಒಂದಾ ವಾಪಾಸು ಸಿಟಿಗೆ ಬರಬೇಕು, ಇಲ್ಲದಿದ್ದರೆ ಅಲ್ಲಿ ದುಪ್ಪಟ್ಟು ಹಣ ಪಾವತಿಸಿ ಪಾರ್ಕಿಂಗ್‌ನಲ್ಲಿ ನಿಲ್ಲಬೇಕು. ಹೀಗಾಗಿ ಚಾಲಕರಿಗೆ ಸರಿಯಾಗಿ ದುಡಿಮೆ ಮಾಡಲು ಆಗದೆ ತಮ್ಮ ಜೀವನ ನಿರ್ವಹಿಸಲು ಬಹಳ ಕಷ್ಟವಾಗುತ್ತಿದೆ. ಆದ್ದರಿಂದ ಕನಿಷ್ಠ 25 ವಾಹನಗಳಿಗೆ ಪಾರ್ಕಿಂಗ್ ನೀಡುವಂತೆ ಏರ್‌ಪೋರ್ಟ್ ಅಥಾರಿಟಿಗೆ ಹಲವು ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನವಿಲ್ಲ.
ಮಂಗಳೂರು ವಿಮಾಣ ನಿಲ್ದಾಣದಲ್ಲಿ ಖಾಸಗಿ ವಾಹನಗಳಿಗೆ ಇರುವ ಪಾಸ್ಟ್‌ಟ್ಯಾಗ್ ಲೈನ್ ಕಮರ್ಷಿಯಲ್ ವಾಹನಗಳಿಗೆ ಇಲ್ಲ. ಇದರಿಂದ ಕಮರ್ಷಿಯಲ್ ವಾಹನಗಳು ಪಾರ್ಕಿಂಗ್ ಮಾಡದೇ ಗ್ರಾಹಕರನ್ನು ಪಿಕಪ್ ಮಾಡಿ ಕೂಡಲೇ ಹೊರಗೆ ಹೋದರೂ (10 ನಿಮಿಷಗಳ ಒಳಗೆ ಆದರೂ) 100 ರೂಪಾಯಿ ಪಾರ್ಕಿಂಗ್ ಹಣ ಪಾವತಿ ಮಾಡಿ ಹೋಗಬೇಕಾಗುತ್ತದೆ. ಒಂದು ವೇಳೆ ಪಾಸ್ಟ್‌ಟ್ಯಾಗ್ ಲೈನ್ ಇದ್ದರೆ 10 ನಿಮಿಷದ ಒಳಗಡೆ ಏರ್‌ಪೋರ್ಟ್ ಒಳಗೆ ಬಂದು ಗ್ರಾಹಕರನ್ನು ಪಿಕಪ್ ಮಾಡಿ ಹೊರಗೆ ಹೋದರೆ ಹಣ ಕಟ್ಟಬೇಕಾಗಿಲ್ಲ.
ಆ್ಯಪ್ ಆಧಾರಿತ ರೇಡಿಯೋ ಟ್ಯಾಕ್ಸಿ ವಾಹನಗಳಿಗೆ ಗ್ರಾಹಕರನ್ನು ಪಿಕಪ್ ಮಾಡಲು 2ನೇ ಲೈನಿನಲ್ಲಿ ಮಾತ್ರ ಅವಕಾಶ ನೀಡಿದ್ದಾರೆ. ಇದರಿಂದ ಮಳೆಗಾಲದಲ್ಲಿ ಮಳೆ ಬಂದಾಗ 2ನೇ ಲೈನ್‌ಗೆ ಗ್ರಾಹಕರು ಒದ್ದೆಯಾಗಿ ಬರಬೇಕಾಗುತ್ತದೆ. ಹಿರಿಯ ನಾಗರಿಕರಿಗೆ ಅಲ್ಲಿಯವರೆಗೆ ಬರಲು ತುಂಬಾ ಕಷ್ಟವಾಗುತ್ತದೆ. ಅಲ್ಲದೆ ಆ್ಯಪ್ ಆಧಾರಿತ ಟ್ಯಾಕ್ಸಿಯವರು ತಮ್ಮ ವೈಯಕ್ತಿಕ ಬಾಡಿಗೆ ಇದ್ದರೂ ಅದನ್ನೂ 2ನೇ ಲೈನಲ್ಲಿ ಪಿಕಪ್ ಮಾಡಬೇಕು ಅಂತ ನಿಯಮ ಮಾಡಿರುವುದರಿಂದ ಎಷ್ಟೋ ಗ್ರಾಹಕರು ನಮ್ಮ ಮೇಲೆ ಅಸಮಾಧಾನ ಪಟ್ಟಿದ್ದಾರೆ. ಇದರಿಂದ ನಮ್ಮ ವೈಯಕ್ತಿಕ ಬಾಡಿಗೆ ಕಡಿಮೆಯಾಗಿದೆ.
ಓಲಾ, ಉಬರ್ ಪಾರ್ಕಿಂಗ್ ಹತ್ತಿರ ಚಾಲಕರಿಗೆ ಕುಳಿತುಕೊಳ್ಳಲು ಯಾವುದೇ ಸರಿಯಾದ ಸೌಕರ್ಯಗಳಿಲ್ಲ. ಸುಡು ಬಿಸಿಲು, ಜಡಿ ಮಳೆಯಲ್ಲಿಯೂ ಸದಾ ವಾಹನದೊಳಗಡೆಯೇ ಕೂರಬೇಕಾಗುತ್ತದೆ. ಇದರಿಂದ ದೈಹಿಕ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ಇಲ್ಲಿ ಶೌಚಾಲಯದ ವ್ಯವಸ್ಥೆಯೂ ಕೂಡ ಇಲ್ಲ.
ಏರ್‌ಪೋರ್ಟ್ ನಿರ್ಗಮನ ದ್ವಾರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ 2-3 ವಿಮಾನಗಳು ಒಮ್ಮೆಲೇ ಬಂದಾಗ ಅಲ್ಲಿ ವಾಹನಗಳು ಬ್ಲಾಕ್ ಆಗುವುದರಿಂದ ಗ್ರಾಹಕರನ್ನು ಡ್ರಾಪ್ ಮಾಡಲು ಬಂದ ವಾಹನಗಳು 10 ನಿಮಿಷ ದಾಟಿದರೆ 100 ರೂ. ಕಟ್ಟಿಯೇ ಹೋಗಬೇಕು. ನಿರ್ಗಮನ ಗೇಟಿನಲ್ಲಿ ಬ್ಲಾಕ್ ಆಗುವುದು ಏರ್‌ಪೋರ್ಟ್ ಅವ್ಯವಸ್ಥೆಯೇ ಆದರೂ ಚಾಲಕರಿಂದ ಹಣ ಪಡೆಯುವುದು ತೀರಾ ಅನ್ಯಾಯ. ಆದ್ದರಿಂದ ಇದರ ಬಗ್ಗೆ ಆಡಳಿತ ಮಂಡಳಿ ಗಮನಹರಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ರಮೇಶ್ ನಾಯ್ಕ್, ಇಮ್ತಿಯಾಜ್ ಕುತ್ತಾರ್, ಕಮಾಲಾಕ್ಷ ಬಜಾಲ್, ಅಬ್ದುಲ್ ಅಜೀಜ್ ಮತ್ತಿತರರು ಉಪಸ್ಥಿತರಿದ್ದರು.