image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

2026 ಜನವರಿ 5ರಂದು ಡಾ. ಹರಿಕೃಷ್ಣ ಪುನರೂರು ಅವರಿಗೆ 'ಪಾತಾಳ ಸ್ಮೃತಿ ಗೌರವ'

2026 ಜನವರಿ 5ರಂದು ಡಾ. ಹರಿಕೃಷ್ಣ ಪುನರೂರು ಅವರಿಗೆ 'ಪಾತಾಳ ಸ್ಮೃತಿ ಗೌರವ'

ಮಂಗಳೂರು: 'ಪಾತಾಳ ಸ್ಮೃತಿ ಗೌರವ' ಸಂಘಟಕ, ದಾನಿ, ಸಾಹಿತ್ಯ ಪರಿಚಾರಕ, ಕಲಾ ಪೋಷಕ, ಸಜ್ಜನ-ಸಹೃದಯಿ ಡಾ.ಹರಿಕೃಷ್ಣ ಪುನರೂರು ಅವರು ಪಾತಾಳ ಯಕ್ಷ ಪ್ರತಿಷ್ಠಾನ ಆಯೋಜಿಸುವ 'ಪಾತಾಳ ಸ್ಮೃತಿ ಗೌರವ'ಕ್ಕೆ ಭಾಜನರಾಗಿದ್ದಾರೆ ಎಂದು ಡಾ. ಮಾಲಿಂಗ ಭಟ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಜನವರಿ 5ರ  ಸೋಮವಾರ, ಸಂಜೆ 4 ಗಂಟೆಗೆ ಉಪ್ಪಿನಂಗಡಿ ಸನಿಹದ ಪಾತಾಳ ಮನೆಯಲ್ಲಿ ಸ್ಮೃತಿ-ಗೌರವ ಪ್ರದಾನ ಸಮಾರಂಭ ಸಂಪನ್ನವಾಗಲಿದೆ.

ಹಿರಿಯ ಸ್ತ್ರೀವೇಷಧಾರಿ ಕೀರ್ತಿಶೇಷ ಪಾತಾಳ ವೆಂಕಟ್ರಮಣ ಭಟ್ಟರ ಸ್ಮೃತಿಯಲ್ಲಿ ನಡೆಯುವ ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಡಿ.ಹರ್ಷೇಂದ್ರ ಕುಮಾರ್ ವಹಿಸಲಿದ್ದು, ಪಾತಾಳರ ಕುರಿತಾದ ನೆನಪು ಹಾಗೂ ಡಾ.ಹರಿಕೃಷ್ಣ ಪುನರೂರು ಅವರ ಕುರಿತು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪೂರ್ವಾಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಗೌರವ ನುಡಿಹಾರವನ್ನು ಸಲ್ಲಿಸಲಿದ್ದಾರೆ. ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಮುಖ್ಯಸ್ಥ ಶ್ರೀ ಅರುಣ ಕುಮಾರ್ ಪುತ್ತಿಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು,  ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ ಶುಭಾಶಂಸನೆ ಮಾಡಲಿದ್ದಾರೆ.ಈ ಸಂದರ್ಭದಲ್ಲಿ ಖ್ಯಾತ ಗಮಕಿ ಶ್ರೀ ಗಣಪತಿ ಪದ್ಯಾಣ ಹಾಗೂ ಖ್ಯಾತ ಸಾಹಿತಿ, ಪ್ರವಚನಗಾರ ಶ್ರೀ ಮುಳಿಯ ಶಂಕರ ಭಟ್ಟರನ್ನು 'ಪಾತಾಳ ಸ್ಮೃತಿ ಪುರಸ್ಕಾರ' ಪ್ರದಾನ ಮಾಡುವ ಮೂಲಕ ಗೌರವಿಸಲಾಗುವುದು. ಅಪರಾಹ್ನ ಗಂಟೆ 2ಕ್ಕೆ 'ಶ್ರೀ ಕೃಷ್ಣ ಪರಂಧಾಮ' ಎನ್ನುವ ಆಖ್ಯಾನದ 'ಕಾವ್ಯ ವಾಚನ' ನಡೆಯಲಿದೆ ಎಂದರು.

ಕೀರ್ತಿಶೇಷ ಪಾತಾಳ ವೆಂಕಟ್ರಮಣ ಭಟ್ಟರು ಸಕ್ರಿಯವಾಗಿರುವಾಗಲೇ 'ಪಾತಾಳ ಯಕ್ಷ ಪ್ರತಿಷ್ಠಾನ'ವನ್ನು ರೂಪೀಕರಿಸಿ ಹಲವಾರು ಹಿರಿಯ ಕಲಾವಿದರಿಗೆ 'ಪಾತಾಳ ಪ್ರಶಸ್ತಿ' ನೀಡಿ ಸತ್ಕರಿಸಿರುವುದು ಉಲ್ಲೇಖನೀಯ. ಅವರು 19-7-2025ರಂದು ನಿಧನರಾಗಿದ್ದು, ಅವರ ಹೆಸರಿನಲ್ಲಿ ನಡೆಯುವ ಮೊದಲ 'ಸ್ಮೃತಿ ಗೌರವ' ಸಮಾರಂಭವಾಗಿದ್ದು, ಎಲ್ಲಾ ಆಸಕ್ತರಿಗೆ ಮುಕ್ತ ಪ್ರವೇಶ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹರಿಕೃಷ್ಣ ಪುನರೂರು, ಅಂಭಾ ಪ್ರಸಾದ್ ಪಾತಾಳ, ಶ್ರೀ ರಾಮ್ ಪಾತಾಳ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ