ಮಂಗಳೂರು: 35 ವರ್ಷಗಳ ಹಿಂದೆ ಅಬಿಧಮನಿಯಲ್ಲಿ ಅಳವಡಿಸಿದ್ದ ಪೇಸ್ ಮೇಕರ್ ತಂತಿಯು ಸೋಂಕಿಗೆ ಒಳಗಾಗಿದ್ದು, ಶಸ್ತ್ರಚಿಕಿತ್ಸೆ ರಹಿತವಾಗಿ ಹೊರತೆಗೆಯುವಲ್ಲಿ ಒಮೇಗಾ ಆಸ್ಪತ್ರೆ ಹೊಸ ಸಾಧನೆ ಮಾಡಿದೆ ಎಂದು ಆಸ್ಪತ್ರೆಯ ನಿರ್ದೇಶಕ ಹಾಗೂ ಹಿರಿಯ ಹೃದ್ರೋಗ ತಜ್ಞ ಡಾ. ಮುಕುಂದ್ ಕೆ. ತಿಳಿಸಿದರು. ಅವರು ಇಂದು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, 68 ವರ್ಷದ ವ್ಯಕ್ತಿಯು ಅಬಿಧಮನಿಗೆ ಅಳವಡಿಸಿದ ಹಳೆಯ ಪೇಸ್ ಮೇಕರ್ ತಂತಿಗೆ ಸೋಂಕು ತಗುಲಿ ಸಮಸ್ಯೆಯಿಂದ ಬಳಲುತ್ತಿದ್ದು, ಇದನ್ನು ಒಮೇಗಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಕೆ. ಮುಕುಂದ್ ಅವರ ತಂಡ ಶಸ್ತ್ರಚಿಕಿತ್ಸಾ ರಹಿತ ತಂತ್ರಜ್ಞಾನದ ಮೂಲಕ ಕ್ಯಾಥ್ ಲ್ಯಾಬ್ ನಲ್ಲಿ ಒಂದು ಗಂಟೆಗಳ ಕಾಲದ ಚಿಕಿತ್ಸೆ ನೀಡಿ ತಂತಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ ಎಂದರು. ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ. ಯಾಜ್ನಿಕ್ ಮುಕುಂದ್ ಮಾತನಾಡಿ ವಿಶೇಷವಾದ ಪೇಸ್ ಮೇಕರ್ ಹೊರತೆಗೆಯುವ ತಂತ್ರಜ್ಞಾನವನ್ನು ಬಳಸಿ ಯಾವುದೇ ತೊಡಕು ಇಲ್ಲದೇ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಅರಿವಳಿಕೆಯಲ್ಲಿ ಡಾ. ಮೇಘನಾ ಮುಕುಂದ್ ಅವರು ಸಹಕರಿಸಿದ್ದು, ಈಗ ರೋಗಿಯು ಆರೋಗ್ಯವಂತರಾಗಿ ಗುಣಮುಖರಾಗಿದ್ದು, ದೀರ್ಘಕಾಲದ ಅನಾರೋಗ್ಯದಿಂದ ಗುಣಮುಖರಾಗಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ. ಯಾಜ್ನಿಕ್ ಮುಕುಂದ್, ಅರಿವಳಿಕೆ ತಜ್ಞೆ ಡಾ. ಮೇಘನಾ ಮುಕುಂದ್, ಡಾ. ಅಭಿಜಿತ್ ಉಪಸ್ಥಿತರಿದ್ದರು.