ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಿದರು. ಇದೇ ಸಮಾರಂಭದಲ್ಲಿ ಉತ್ತರ ಕನ್ನಡಕ್ಕೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಮಂಗಳೂರು, ಉಡುಪಿ ಮತ್ತು ಕಾರವಾರದ ಸುಮಾರು 300 ಕಿಮೀ ಉದ್ದದ ಕರಾವಳಿ ತೀರವನ್ನು ಪ್ರವಾಸೋದ್ಯಮದ ಹಬ್ ಆಗಿ ಪರಿವರ್ತಿಸಲು ಸರ್ಕಾರ ಹೊಸ ಟೂರಿಸಂ ಪಾಲಿಸಿ ಜಾರಿಗೆ ತರಲಿದೆ ಎಂದು ತಿಳಿಸಿದ್ದಾರೆ. ಅರಣ್ಯ ಅತಿಕ್ರಮಣ ವಿಚಾರದಲ್ಲಿ, 3 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡವರು ಮತ್ತು ರೈತರನ್ನು ಒಕ್ಕಲೆಬ್ಬಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಇನ್ನು ಉತ್ತರ ಕನ್ನಡ ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 210 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಿದ್ದು, ಆಧುನಿಕ ಸೌಲಭ್ಯವುಳ್ಳ ಹೊಸ ಕಟ್ಟಡ ನಿರ್ಮಿಸುವುದಾಗಿ ಘೋಷಿಸಿದರು. ಇದೆ ವೇಳೆ ಶರಾವತಿ ಯೋಜನೆ ಮತ್ತು ವರದಾ ಹಾಗೂ ಬೇಡ್ತಿ ನದಿ ಜೋಡಣೆಗೆ ಡಿಪಿಆರ್ ಸಿದ್ಧಪಡಿಸಲು ಚೀಫ್ ಇಂಜಿನಿಯರ್‌ಗೆ ನೀಡಿರುವುದಾಗಿ ತಿಳಿಸಿದರು. ಉಳಿಪೆಟ್ಟು ಬೀಳದೆ ಯಾವುದೇ ಶಿಲೆ ಮುೂರ್ತಿಯಾಗಲ್ಲ ಎಂದ ಉಪಮುಖ್ಯಮಂತ್ರಿಗಳು, ಇಂದು ನಾಯಕರಾಗಲು ಬಹಳಷ್ಟು ಕಷ್ಟ ಪಡಬೇಕಿದೆ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
ಕರಾವಳಿ ಉತ್ಸವದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ, ಜಿಲ್ಲಾಡಳಿತ ವತಿಯಿಂದ ಶಾಸಕ ಸತೀಶ್ ಸೈಲ್, ವಿಷ್ಣುವಿನ ವಿಶ್ವರೂಪ ದರ್ಶನ ಬಿಂಬಿಸುವ 16 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧದ ವಿಗ್ರಹ ಉಡುಗೊರೆಯಾಗಿ ನೀಡಿದರು. ಡಿಸಿಎಂ ಅವರ ಮನಸ್ಸಿನಲ್ಲಿರುವ ಎಲ್ಲಾ ಬಯಕೆ ಈಡೇರಲೆಂದು ಆಶಿಸುವುದಾಗಿ ತಿಳಿಸಿದರು. ಕರಾವಳಿ ಉತ್ಸವದಲ್ಲಿ ಖ್ಯಾತ ಗಾಯ ದಲೇರ್ ಮೆಹಂದಿ ಅವರ ಕಾರ್ಯಕ್ರಮ ಮನಸೂರೆಗೊಂಡಿತು. ಡಿಸಿಎಂ ಡಿಕೆಶಿ ಕೂಡ ರಿಲ್ಯಾಕ್ಸ್ ಆಗಿ ಕಾರ್ಯಕ್ರಮ ವೀಕ್ಷಿಸಿದರು. ಒಟ್ಟಿನಲ್ಲಿ, ಕರಾವಳಿಗೆ ಉಪಮುಖ್ಯಮಂತ್ರಿ 3 ಮಹತ್ವದ ಘೋಷಣೆಗಳನ್ನು ಮಾಡಿದ್ದು, ಜಿಲ್ಲೆಯ ಜನರಿಗೆ ಹೊಸ ಆಶಾಭಾವನೆ ಮೂಡಿಸಿದೆ.