ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವಕಾಲೇಜಿನ ಆಂತರಿಕ ಸಮಿತಿಯಿಂದ ‘ಮಹಿಳಾ ಸಬಲೀಕರಣ ಮತ್ತು ವೈಚಾರಿಕ ಪ್ರಜ್ಞೆ’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಉಡುಪಿ ಅಜ್ಜರಕಾಡಿನ ಡಾ ಜಿ ಶಂಕರ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ಪ್ರಾಧ್ಯಾಪಕಿ ಡಾ. ನಿಕೇತನ ಮಾತನಾಡಿ ವೈಚಾರಿಕ ಪ್ರಜ್ಞೆಗೂ ವೈಜ್ಞಾನಿಕ ಮನೋಭಾವಕ್ಕೂ ಪರಸ್ಪರ ಸಂಬಂಧವಿದೆ. ವೈಚಾರಿಕ ಪ್ರಜ್ಞೆಯಿಂದ ಸತ್ಯದ ಶೋಧನೆಯಾಗುತ್ತದೆ. ಪ್ರಶ್ನಿಸುವ ಗುಣ ನಮ್ಮನ್ನು ವೈಚಾರಿಕತೆಯತ್ತಾ ಕೊಂಡೊಯ್ಯುತ್ತದೆ. ಮಹಿಳಾ ಸಬಲೀಕರಣ ಎಂದರೆ ಗಂಡು ಮತ್ತು ಹೆಣ್ಣು ಪರಸ್ಪರ ಪೂರಕವಾಗಿ ಬದುಕುವುದು. ಹಿಂದಿನ ಪೀಳಿಗೆಯ ಸಬಲೀಕರಣದ ಕುರಿತಾದ ಹೋರಾಟದ ಫಲವಾಗಿ ಇಂದು ಮಹಿಳೆಯರಿಗೆ ಸಮಾನತೆ ಸಿಗುತ್ತಿದೆ. ಹೆಣ್ಣು ಮತ್ತು ಗಂಡಿನ ನಡುವೆ ಜೈವಿಕ ವ್ಯತ್ಯಾಸ ಸಹಜ ಆದರೆ ಸಾಂಸ್ಕೃತಿಕ ಭೇದ ಸಮಾಜ ಮಾಡಿದ್ದು. ಹೆಣ್ಣನ್ನು ದ್ವಿತೀಯ ದರ್ಜೆಯ ವ್ಯಕ್ತಿಯನ್ನಾಗಿ ನೋಡುವ ದೃಷ್ಠಿ ಅತ್ಯಂತ ಹೀನ ಪ್ರವೃತ್ತಿ. ಇಂತಹ ಸಂದರ್ಭದಲ್ಲಿ ವೈಚಾರಿಕ ಪ್ರಜ್ಞೆಯಿಂದ ಸಮಾಜದ ಸಮಸ್ಯೆಗಳ ಸುಧಾರಣೆ ಸಾದ್ಯ ಎಂದರು.
ನಿಜವಾದ ವೈಜ್ಞಾನಿಕ/ ವೈಚಾರಿಕ ಪ್ರಜ್ಞೆ ಎಂದರೆ ಅದು ಸತ್ಯದ ಶೋಧನೆ ಮಾತ್ರ. ಸರಿ-ತಪ್ಪುಗಳ ನಿಷ್ಕರ್ಷೆ,ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ವೈಚಾರಿಕ ಪ್ರಜ್ಞೆಯಿಂದ ಬರುತ್ತದೆ. ಶ್ರೇಷ್ಠತೆಯ ಅಮಲು ಎಂದೂ ತಲೆಗೇರದಿರಲಿ. ಇದು ಸಮಾಜದಲ್ಲಿ ಗಂಡು-ಹೆಣ್ಣಿನ ನಡುವೆ ಬಿರುಕನ್ನು ತರುತ್ತದೆ. ಹೆಣ್ಣು ಹೆಣ್ಣಿಗೆ ಪೂರಕವಾಗಿ, ಗಂಡು ಹೆಣ್ಣಿಗೆ ಪೂರಕವಾಗಿ, ಹೆಣ್ಣು ಗಂಡಿಗೆ ಪೂರಕವಾಗಿ ನಿಂತರೆ ಮಹಿಳಾ ಸಬಲೀಕರಣಕ್ಕೆ ಅರ್ಥ ಬರುತ್ತದೆ. ವಿದ್ಯೆಯ ಜೊತೆಗೆ ವಿವೇಚನೆಯಿದ್ದರೆ ಸಮಾನತೆಯ ಹಾದಿ ಸುಗಮವಾಗುತ್ತದೆ ಎಂದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್ ಅಧ್ಯಕ್ಷತೆವಹಿಸಿ ಮಾತನಾಡಿ, ಮಹಿಳೆಯರಿಗೆ ಸಿಗುವ ಪ್ರಾಧಾನ್ಯತೆ ಪ್ರದೇಶಕ್ಕನುಗುಣವಾಗಿ ಸಂದರ್ಭಕ್ಕನುಗುಣವಾಗಿ ಪರಿವಾರಕ್ಕನುಗುಣವಾಗಿ ಬದಲಾಗುತ್ತದೆ. ಸಬಲೀಕರಣ ಎಂದರೆ ಆರ್ಥಿಕವಾಗಿ ಮಾತ್ರವಲ್ಲ ಆಲೋಚನಾತ್ಮಕವಾಗಿ ಶಕ್ತಿಶಾಲಿಯಾಗುವುದು, ವೈಚಾರಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಎಂದರು. ಕನ್ನಡ ವಿಭಾಗದ ಉಪನ್ಯಾಸಕಿ ಆಶಾ ನಿರೂಪಿಸಿ, ಆಂತರಿಕ ಸಮಿತಿಯ ಸಂಯೋಜಕಿ ಹಾಗೂ ಕನ್ನಡ ಉಪನ್ಯಾಸಕಿ ಡಾ ಸುಲತಾ ಸ್ವಾಗತಿಸಿದರು.