ಬೆಳ್ತಂಗಡಿ: ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಸುವರ್ಣ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನದ ೧೪ನೇ ಶ್ರಮದಾನ ಕಾರ್ಯಕ್ರಮ ಉಜಿರೆ -ಬೆಳಾಲು ರಸ್ತೆಯಲ್ಲಿ ಶನಿವಾರ ಬ್ಯಾಂಕಿನ ಉಜಿರೆ ಶಾಖೆಯ ನೇತೃತ್ವದಲ್ಲಿ ನಡೆಯಿತು.
ಗೌಡರ ಯಾನೆ ಒಕ್ಕಲಿಗರ ಸಂಘ ಉಜಿರೆ ಇದರ ಗೌರವಾಧ್ಯಕ್ಷ ಗೋಪಾಲಕೃಷ್ಣ ಜಿ.ಕೆ, ಬಂಟರ ಸಂಘ ಉಜಿರೆ ಇದರ ನಿರ್ದೇಶಕರಾದ ವೆಂಕಟರಮಣ ಶೆಟ್ಟಿ, ಉಜಿರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಲಕ್ಷ್ಮಣ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು. ಉಜಿರೆಯ ಬೆಳಾಲು ಕ್ರಾಸ್ ಹಾಗೂ ಕುವೆಂಪುನಗರ ಪರಿಸರಗಳಲ್ಲಿ ಸ್ವಯಂಸೇವಕರು ಶ್ರಮದಾನ ನಡೆಸಿ, ಪರಸರ ಸ್ವಚ್ಛತಾ ಕಾರ್ಯ ಮಾಡಿದರು.
ಉಜಿರೆ ಬಂಟರ ಸಂಘದ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಬಳಂಜ ಮಾತನಾಡಿ, ವಿಶ್ವಕರ್ಮ ಸಹಕಾರ ಬ್ಯಾಂಕ್ ತನ್ನ ಬ್ಯಾಂಕಿಂಗ್ ಚಟುವಟಿಕೆಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಬ್ಯಾಂಕಿನ ಸಾಮಾಜಿಕ ಬದ್ಧತೆಗೆ ಹಿಡಿದ ಕೈಗನ್ನಡಿ ಎಂದು ಶ್ಲಾಘಿಸಿದರು. ಉಜಿರೆಯ ನಂದಗೋಕುಲ ಗೋಶಾಲೆಯ ಅಧ್ಯಕ್ಷರಾದ ಡಾ. ಎಂ.ಎಂ ದಯಾಕರ್ ಮಾತನಾಡಿ, ಸ್ವಚ್ಛತೆಯ ಕಾರ್ಯವು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು, ಮುಂದಿನ ಪೀಳಿಗೆಗೂ ಸ್ವಚ್ಛತೆಯ ಅರಿವು ಮೂಡಿಸಬೇಕಾದರೆ ಇಂಥಹ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಗಳು ಅಗತ್ಯ. ಈ ನಿಟ್ಟಿನಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಹಮ್ಮಿಕೊಂಡಿರುವ ಈ ಸ್ವಚ್ಛತಾ ಅಭಿಯಾನದ ಕೆಲಸ ಅತ್ಯುತ್ತಮವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ಯಾಂಕಿನ ನಿರ್ದೇಶಕ ಡಿ.ಭಾಸ್ಕರ ಆಚಾರ್ಯ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್, ಉಪಾಧ್ಯಕ್ಷ ರವಿ ಮತ್ತು ಸದಸ್ಯರು, ಲಯನ್ಸ್ ಕ್ಲಬ್ ಉಜಿರೆ ಇದರ ಅಧ್ಯಕ್ಷ ಮುರಳಿ ಬಲಿಪ ಹಾಗೂ ಸದಸ್ಯರು, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು ಹಾಗೂ ಸದಸ್ಯರು, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಮಹೇಶ್ ಪಾಟೀಲ್ ಮತ್ತು ವಿದ್ಯಾರ್ಥಿಗಳು, ಬ್ಯಾಂಕಿನ ಗ್ರಾಹಕರು, ಸದಸ್ಯರು, ಉಜಿರೆ ಶಾಖಾ ವ್ಯವಸ್ಥಾಪಕ ಲೋಕೇಶ್ ಎಸ್ ಆರ್ ಹಾಗೂ ಸಿಬ್ಬಂದಿ ವರ್ಗದವರು ಸ್ವಯಂಸೇವಕರಾಗಿ ಭಾಗವಹಿಸಿದ್ದರು.