ಮಂಗಳೂರು: ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯ ಸಚಿವಾಲಯ ಜಂಟಿಯಾಗಿ ಜಲ ಜೀವನ್ ಮಿಷನ್ ನಡಿ ‘ನಲ್-ಜಲ್ ಮಿತ್ರ’ ಕಾರ್ಯಕ್ರಮ ಅನುಷ್ಠಾನ ಮಾಡಲು ಸೂಚಿಸಲಾಗಿರುತ್ತದೆ. ಈ ಕಾರ್ಯಕ್ರಮದ ಬಹು ಕೌಶಲ್ಯ ತರಬೇತಿಯಡಿ ಜಿಲ್ಲೆಯ ಪ್ರತೀ ಗ್ರಾಮ ಪಂಚಾಯತ್ ನ ಸ್ವ-ಸಹಾಯ ಸಂಘದ ತಲಾ ಎರಡು ಮಹಿಳಾ ಅಭ್ಯರ್ಥಿಗಳಿಗೆ ಕೊಳಾಯಿ (ಪ್ಲಂಬಿಂಗ್), ವಿದ್ಯುತ್ ಕೆಲಸ (ಇಲೆಕ್ಟ್ರಿಕಲ್ ಕೆಲಸ)ದ ಉಪಕರಣ ಮತ್ತು ಯಂತ್ರೋಪಕರಣ ರಿಪೇರಿ ಕೆಲಸಗಳ ಬಹು ಕೌಶಲ್ಯ ತರಬೇತಿ ನೀಡಬಹುದಾಗಿರುತ್ತದೆ. ಅದರಂತೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖಾ ವತಿಯಿಂದ ಜಿಲ್ಲೆಯಲ್ಲಿ ಒಟ್ಟು 161 ಫಲಾನುಭವಿಗಳಿಗೆ ಜಲ್-ವಿತರಣ್ ಸಂಚಾಲಕ್ ಜಾಬ್ ರೋಲ್ ಅಡಿಯಲ್ಲಿ ತರಬೇತಿ ನೀಡಲಾಗಿರುತ್ತದೆ.
ಈ ನಿಟ್ಟಿನಲ್ಲಿ ಫಲಾನುಭವಿಗಳಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಟೂಲ್ ಕಿಟ್ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕೆ.ಇ. ಜಯರಾಂ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿ’ಸೋಜಾ, ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಕವಿತಾ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.