ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಅಧೀನದ 22 ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶಾತಿ ಇಲ್ಲದ ಕಾರಣ ಮುಚ್ಚಲಿವೆ. ವಿವಿ ಕುಲಪತಿ ಪ್ರೊ|ಪಿ.ಎಲ್.ಧರ್ಮ ಅಧ್ಯಕ್ಷತೆಯಲ್ಲಿ ಆನ್‌ಲೈನ್ ಮೂಲಕ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಈ ಕಾಲೇಜುಗಳಲ್ಲಿ ನಿಗದಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಆಗದ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರವೇಶಾತಿ ಇರದು. ಹಾಗಾಗಿ ವಿವಿಯ ಸಂಯೋಜನೆಯನ್ನು ಮುಂದುವರಿಸಲಾಗಿಲ್ಲ. ಆದರೆ ಈಗ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳು ಕೋರ್ಸ್ ಪೂರ್ಣಗೊಳಿಸಲು ಸಮಸ್ಯೆ ಇಲ್ಲ.
ಆಬಾ ವುಮೆನ್ಸ್ ಫಸ್ಟ್ ಗ್ರೇಡ್ ಕಾಲೇಜು ಸುರತ್ಕಲ್, ಅಂಜುಮನ್ ಫಸ್ಟ್ ಗ್ರೇಡ್ ಕಾಲೇಜು ಮಂಗಳೂರು, ಅಮೃತ ಕಾಲೇಜ್ ಪಡೀಲ್, ಸಿಲಿಕಾನ್ ಕಾಲೇಜ್ ಆಫ್ ಅಡ್ವಾನ್‌ಸ್ಡ್ ಕಾಲೇಜು ಕೊಂಚಾಡಿ, ಮೋಗ್ಲಿಂಗ್ ಇನ್ ಸ್ಟಿಟ್ಯೂಟ್ ಆಫ್ ಜರ್ಮನ್ ಲಾಂಗ್ವೇಜ್ ಬಲ್ಮಠ, ಸರ್ಸ ಕಾಲೇಜ್ ಆಫ್ ಆರ್ಟ್ಸ್ ಆಯಂಡ್ ಸೈನ್ಸ್ ಮಂಗಳೂರು, ರೊಸಾರಿಯೊ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಬೋಳಾರ, ಕರಾವಳಿ ಕಾಲೇಜ್ ಆಫ್ ಎಜುಕೇಶನ್, ಪ್ರೇಮಕಾಂತಿ ಕಾಲೇಜ್ ಆಫ್ ಎಜುಕೇಶನ್.ಸೇಪಿಯೆನ್ಶಿಯ ಬೆಥನಿ ಫಸ್ಟ್ ಗ್ರೇಡ್ ಕಾಲೇಜು ನೆಲ್ಯಾಡಿ, ಶಾರದಾ ವುಮೆನ್ಸ್ ಕಾಲೇಜ್ ಸುಳ್ಯ, ರಾಮಕುಂಜೇಶ್ವರ ಕಾಲೇಜ್, ಹಝರಂತ ಸಯ್ಯದ್ ಮದನಿ ವುಮೆನ್ಸ್ ಕಾಲೇಜ್ ಉಳ್ಳಾಲ, ಸಂಯ ಸೆಬಾಸ್ಟಿಯನ್ ಕಾಲೇಜ್ ಆಫ್ ಕಾಮರ್ಸ್, ಸಂತ ಥೋಮಸ್ ಕಾಲೇಜ್ ಬೆಳ್ತಂಗಡಿ, ಮಾರ್ ಇವನಾಯ್ಸ ಕಾಲೇಜ್ ಕಡಬ, ಮಾಧವ ಪೈ ಕಾಲೇಜ್ ಮಣಿಪಾಲ, ಮೂಕಾಂಬಿಕಾ ಫಸ್ಟ್ ಗ್ರೇಡ್ ಕಾಲೇಜ್ ಬೈಂದೂರು, ವರಸಿದ್ಧಿ ವಿನಾಯಕ ಫಸ್ಟ್ ಗ್ರೇಡ್ ಕಾಲೇಜು ಕುಂದಾಪುರ, ಬಿ.ಡಿ.ಶೆಟ್ಟಿ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಐರೋಡಿ ಉಡುಪಿ, ವಿದ್ಯಾನಿಕೇತನ ಫಸ್ಟ್ ಗ್ರೇಡ್ ಕಾಲೇಜು ಕಾಪು, ಕೃಷ್ಣಬಾಯ್ ವಾಸುದೇವ ಶೆಣೈ ಮೆಮೊರಿಯಲ್ ಕಾಲೇಜು ಕಟಪಾಡಿ, ಇವು ಮುಚ್ಚಲಿವೆ.
ಮಂಗಳೂರು ವಿವಿಯಲ್ಲಿ ಅರಭಾಷೆ ಕುರಿತು ಅಧ್ಯಯನ, ಸಂಶೋಧನೆಗಾಗಿ ಆರಂಭಿಸಲು ಉದ್ದೇಶಿಸಿರುವ ಅರಭಾಷೆ ಅಧ್ಯಯನ ಕೇಂದ್ರಕ್ಕೆ ರಾಜ್ಯಪಾಲರಿಂದ ಅನುಮೋದನೆ ಸಿಕ್ಕಿದ್ದು, ಮುಂದಿನ ಚಟುವಟಿಕೆಗಳನ್ನು ನಡೆಸಲು ವಿವಿ ಶೈಕ್ಷಣಿಕ ಮಂಡಳಿ ತೀರ್ಮಾನಿಸಿದೆ. ಸರಕಾರಕ್ಕೆ ಸಲ್ಲಿಸಲಾದ ಪ್ರಸ್ತಾವನೆಯಲ್ಲಿ ಕೇಂದ್ರದ ಸ್ವರೂಪದ ಬಗ್ಗೆ ತಿಳಿಸ ಲಾಗಿತ್ತು. ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಪ್ರಾದೇಶಿಕ ಭಾಷೆಯಾದ ಅರೆಭಾಷೆ ಬಗ್ಗೆ ಮತ್ತು ಈ ಭಾಷೆ ಮಾತನಾಡುವ ಜನರ ಭಾಷೆ, ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುವ ದೃಷ್ಟಿಯಿಂದ ಈ ಕೇಂದ್ರ ಮುಖ್ಯ ಎಂದು ಕುಲಪತಿ ತಿಳಿಸಿದರು. ರಾಜ್ಯ ಶಿಕ್ಷಣ ಮಾರ್ಗಸೂಚಿ ಪ್ರಕಾರ ಬಿ.ಎ. ಪದವಿ ಕಾರ್ಯಕ್ರಮದ 4ನೆಯ ಸೆಮಿಸ್ಟರ್‌ನ ಅರ್ಥಶಾಸ್ತ್ರ ಕೋರ್ಸಿಗೆ ಕೌಶಲ ಆಧಾರಿತ ಕೋರ್ಸ್ ಹಾಗೂ ಬಿ.ಎ ಪದವಿ ಕಾರ್ಯಕ್ರಮದ ಪತ್ರಿಕೋದ್ಯಮ ಕೋರ್ಸಿನ ತೃತೀಯ ಮತ್ತು ಚತುರ್ಥ ಸೆಮಿಸ್ಟರ್‌ಗೆ ಅನ್ವಯವಾಗುವಂತೆ ಎಲೆಕ್ಟಿವ್ ಕೋರ್ಸ್‌ಗಳ ಪಠ್ಯ ಕ್ರಮದ ಅನುಮೋದನೆ ಬಗ್ಗೆಯೂ ನಿರ್ಣಯಿಸಲಾಯಿತು. ವಿವಿಯಲ್ಲಿ ಪಿಎಚ್‌ಡಿ ಅನಂತರದ ಕಾರ್ಯಕ್ರಮ ವನ್ನು ಪ್ರಾರಂಭಿಸಲು ನಿರ್ಣಯಿಸಿ ಮಾರ್ಗಸೂಚಿಯನ್ನು ತಯಾರಿಸಿ ಎಲ್ಲಾ ನಿಕಾಯಗಳ ಡೀನ್‌ಗಳ ಸಮಿತಿ ಸಲ್ಲಿಸಿದ ಪರಿಷ್ಕೃತ ಮಾರ್ಗಸೂಚಿಯನ್ನು ಅನುಮೋದಿಸಲಾಯಿತು.