image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಿಸೆಂಬರ್ 25ರಂದು ಆಶಾ ಪ್ರಕಾಶ್ ಶೆಟ್ಟಿ ಸಹಾಯ ಪ್ರದಾನ ಸಮಾರಂಭ 'ನೆರವು-2025'

ಡಿಸೆಂಬರ್ 25ರಂದು ಆಶಾ ಪ್ರಕಾಶ್ ಶೆಟ್ಟಿ ಸಹಾಯ ಪ್ರದಾನ ಸಮಾರಂಭ 'ನೆರವು-2025'

ಮಂಗಳೂರು: ಪ್ರತೀ ವರ್ಷ ಡಿಸೆಂಬರ್ 25 ರಂದು ನಾವು ಗೋಲ್ಡ್ ಫಿಂಚ್ ಮೈದಾನದಲ್ಲಿ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ "ನೆರವು" ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು,  ವರ್ಷದಿಂದ ವರ್ಷಕ್ಕೆ ನಾವು ಬೆಂಬಲಿಸುತ್ತಿರುವ ಕುಟುಂಬಗಳು ಮತ್ತು ಸಂಘ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ. ಸಣ್ಣ ಪರಿವರ್ತನೆಯೊಂದು ನಮ್ಮ ನೆರವು ಕಾರ್ಯಕ್ರಮದಿಂದ ಆಗಿದೆ ಎಂಬುದನ್ನು ನಮಗೆ ದೊರಕಿರುವ ಹಿಮ್ಮಾಹಿತಿ ಹೇಳುತ್ತದೆ ಎಂ ಆರ್ ಜಿ ಗ್ರೂಪ್ ನ ಸಂಸ್ಥಾಪಕ ಡಾ. ಪ್ರಕಾಶ್ ಶೆಟ್ಟಿ ಹೇಳಿದ್ದಾರೆ. ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 

ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೈದ್ಯಕೀಯ ಚಿಕಿತ್ಸೆ ಸುಲಭವಾಗಿದೆ ಎಂಬುದೇನೋ ನಿಜ. ಆದರೆ ಆ ಸವಲತ್ತುಗಳಿಗೆ ಎಲ್ಲರಿಗೂ ಪ್ರವೇಶ ಸಾಧ್ಯವಾಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ. ನಮ್ಮ ನೆರವಿನ ಮೊತ್ತದಲ್ಲಿ ದೊಡ್ಡ ಭಾಗ ಇದಕ್ಕೆ ಮೀಸಲಾಗಿದೆ. ಆಧುನಿಕ ಚಿಕಿತ್ಸೆಯ ಪ್ರಜಾಪ್ರಭುತ್ತೀಕರಣದ ನಿಟ್ಟಿನಲ್ಲಿ ನಮ್ಮದೊಂದು ಕಿರು ಹೆಜ್ಜೆ ಇದು ಎಂದು ನಾವು ಪ್ರಾಮಾಣಿಕವಾಗಿ ಮತ್ತು ನಮ್ಮತೆಯಿಂದ ಭಾವಿಸುತ್ತೇವೆ. ಜಾತಿ, ಧರ್ಮ, ಪಂಗಡ ಎಂಬ ಯಾವ ಮನುಷ್ಯ ನಿರ್ಮಿತ ಗಡಿಗಳಿಲ್ಲದೆ. ಅವಶ್ಯಕತೆ ಇರುವವರನ್ನು ನಮ್ಮ ತಂಡ ಹುಡುಕಿ, ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಇಲ್ಲಿ ಅವಶ್ಯಕತೆಯೇ ಮಾನದಂಡವಾಗಿದೆ. ನಮಗೆ ವಿಶ್ವಾಸವಿದೆ -ಅನಿವಾರ್ಯತೆ ಇಲ್ಲದಿದ್ದರೆ ಯಾರೂ ಅರ್ಜಿ ಹಾಕುವುದಿಲ್ಲ. ದೈಹಿಕ ಸಮಸ್ಯೆ ಇರುವ ದಿವ್ಯಾಂಗರು, ಡಯಾಲಿಸ್ ಸಹಿತ ನಿರಂತರ ಚಿಕಿತ್ಸೆಯನ್ನು ಪಡೆಯಬೇಕಾದ ಅನಿವಾರ್ಯತೆ ಇರುವವರು, ಶಿಕ್ಷಣ ಮುಂದುವರಿಕೆಗೆ ನೆರವು ಬೇಕಾದವರು, ಸಿಂಗಲ್ ಪೇರೆಂಟ್ ಮಕ್ಕಳು, ಸಾಂಸ್ಕೃತಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ನೆರವಿನ ಬೆಂಬಲ ಪಡೆಯಲಿದ್ದಾರೆ. ಮನೆ ಕಟ್ಟಿ ಅದರ ಗೃಹ ಪ್ರವೇಶಕ್ಕಾಗಿ ಕಾಯುತ್ತಿರುವವರಿಗೂ ಅವರ ಭಾವನಾತ್ಮಕ ಮತ್ತು ಹಣಕಾಸಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ ನೆರವು ಕೊಡಲಾಗುತ್ತಿದೆ. ಮನೆ ಕಟ್ಟಲು ಸಹಾಯ ಕೋರಿದ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಈ ಯೋಜನೆಯನ್ನು ಆರಂಭ ಮಾಡಿದ ಮೊದಲ ವರ್ಷ ಒಟ್ಟು 1.25 ಕೋ.ರೂ. ನೆರವು ವಿತರಿಸಿದ್ದೇವೆ. ಆಗ 28 ಸಂಘ ಸಂಸ್ಥೆಗಳು ಪ್ರಯೋಜನ ಪಡೆದಿವೆ. ಈಗ 7ನೇ ವರ್ಷದಲ್ಲಿ 100ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ನೆರವು ವಿತರಣೆಯಾಗಲಿದೆ. ಸರಿಸುಮಾರು 4 ಸಾವಿರ ಕುಟುಂಬಗಳು ಈ ಕಾರ್ಯಕ್ರಮದಲ್ಲಿ "ನೆರವು" ಬೆಂಬಲ ಪಡೆಯಲಿವೆ. 9.5 ಕೋ.ರೂ. ಗಳಿಗೂ ಅಧಿಕ ಮೊತ್ತ ವಿತರಿಸಲಾಗುತ್ತಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಪ್ರಾದೇಶಿಕತೆಯನ್ನೂ ಗಮನಿಸಲಾಗಿದೆ. ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರ ಮತ್ತು ನಮ್ಮ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗಿದೆ ಎಂದರು.

 ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದ‌ರ್ ಅವರು ಪಾಲ್ಗೊಳ್ಳಲಿದ್ದು, ಚಲನ ಚಿತ್ರ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾಗವಹಿಸುತ್ತಾರೆ. ಮೂಡಬಿದ್ರೆಯ ಅಳ್ವಾಸ್ ಎಜುಕೇಷನ್ ಟ್ರಸ್ಟ್‌ನ ಡಾ.ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ.ಗ್ರೂಪಿನ ಗೌರವ್ ಪಿ. ಶೆಟ್ಟಿ ಅಂದಿನ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇರುತ್ತಾರೆ.

ಯೋಜನೆ ಆರಂಭವಾದ ವರ್ಷ 2019, ಕಳೆದ ವರ್ಷ 3000 ಕುಟುಂಬಗಳಿಗೆ ಆರು ಕೋಟಿ ನೆರವು ವಿತರಿಸಲಾಗಿತ್ತು. ಈ ವರ್ಷ ಸರಿಸುಮಾರು 4000 ಕುಟುಂಬಗಳಿಗೆ ಮತ್ತು 100 ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ನೆರವು ವಿತರಿಸಲಾಗುತ್ತಿದೆ. 9.5 ಕೋ.ರೂ.ಗಳಿಗೂ ಅಧಿಕ ಮೊತ್ತ ವಿತರಿಸಲಾಗುತ್ತಿದೆ. ಕಳೆದ ವರ್ಷದವರೆಗೆ ಪ್ರಧಾನವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದ ಯೋಜನೆಯ ಭೌಗೋಳಿಕ ವ್ಯಾಪ್ತಿ ಶಿವಮೊಗ್ಗ, ಚಿಕ್ಕಮಗಳೂರು ಭಾಗಶಃ ಉತ್ತರ ಕನ್ನಡ ಜಿಲ್ಲೆಗಳಿಗೂ ವಿಸ್ತರಣೆಯಾಗಿದೆ. ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಅಥವಾ ಕೆಲವು ಸಂದರ್ಭಗಳಲ್ಲಿ ಚೆಕ್ ಮೂಲಕ ಪಾವತಿಸಲಾಗುತ್ತದೆ. ಸಮುದಾಯದ ಆಸ್ತಿಗಳನ್ನು ಸೃಷ್ಟಿಸುವ ಧಾರ್ಮಿಕ ಕ್ಷೇತ್ರ, ಪರಂಪರೆಯ ಕ್ಷೇತ್ರಗಳಿಗೆ ನೆರವು ನೀಡಲಾಗಿದೆ. ಫಲಾನುಭವಿಗಳನ್ನು ಕರೆತರಲು ವಾಹನ ವ್ಯವಸ್ಥೆಯನ್ನು ಎಂ.ಆರ್.ಜಿ.ಗ್ರೂಪ್ ಮಾಡುತ್ತದೆ. ಉಪಾಹಾರದ ವ್ಯವಸ್ಥೆ ಎಲ್ಲರಿಗೂ ಇರುತ್ತದೆ.

ಶಿಕ್ಷಣಕ್ಕೆ ಪ್ರೋತ್ಸಾಹ ಶೀರ್ಷಿಕೆಯಡಿ ನೆರವು ಪಡೆದವರು ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿ ಉದ್ಯೋಗಿಗಳಾಗಿದ್ದಾರೆ, ಅವರ ಕುಟುಂಬಗಳಿಗೆ ಆಧಾರ ಸ್ತಂಭವಾಗಿದ್ದಾರೆ. ಕ್ರೀಡಾ ಶೀರ್ಷಿಕೆಯಡಿ ಯೋಜನೆಯ ಬೆಂಬಲ ಪಡೆದವರು ಸಾಧನೆಯ ಪಥದಲ್ಲಿ ಸಾಗುತ್ತಿದ್ದಾರೆ. ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ನೀಡಿರುವ ಬೆಂಬಲದಿಂದ ಬಾಲಕ ಮತ್ತು ಬಾಲಕಿಯರಿಗೆ ನೈರ್ಮಲ್ಯಯುಕ್ತ ಕೌಚಾಲಯಗಳ ಸೌಲಭ್ಯ ಒದಗಿದೆ. ಪರೋಕ್ಷ ಪರಿಣಾಮ ಎಂದರೆ ಶಾಲಾ ಮಕ್ಕಳಲ್ಲಿ ನೈರ್ಮಲ್ಯದ ಕಾಳಜಿ ಹೆಚ್ಚಿದೆ, ಜೊತೆಗೆ ಆರೋಗ್ಯರಕ್ಷಣೆಯ ಕವಚವೂ ಬಲಗೊಂಡಿದೆ. ಯೋಜನೆಯು ಶಿಕ್ಷಕರ ಕೊರತೆ ಇರುವ ಅನುದಾನಿತ/ಸರಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸುವ ಆಡಳಿತ ಮಂಡಳಿಗಳನ್ನು ಬೆಂಬಲಿಸಿದೆ. ಇದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳವಾಗಿದೆ. ದಿವ್ಯಾಂಗರಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಧನ ಸಲಕರಣೆಗಳನ್ನು ಖರೀದಿಸಲು ನೆರವು ಸಹಾಯ ಮಾಡಿದೆ. ಅನೇಕ ದಿವ್ಯಾಂಗರು ಚಲನೆಯ ಸ್ವಾತಂತ್ರ್ಯವನ್ನು ಪಡೆದಿದ್ದಾರೆ ಎಂದರು.

Category
ಕರಾವಳಿ ತರಂಗಿಣಿ