image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಕಾರಾತ್ಮಕ ಚಿಂತನೆಗಳು ನಮ್ಮ ಮನೋಬಲವನ್ನು ಹೆಚ್ಚಿಸುತ್ತದೆ : ಸ್ವಾಮಿ ಆತ್ಮಜ್ಞಾನಂದ

ಸಕಾರಾತ್ಮಕ ಚಿಂತನೆಗಳು ನಮ್ಮ ಮನೋಬಲವನ್ನು ಹೆಚ್ಚಿಸುತ್ತದೆ : ಸ್ವಾಮಿ ಆತ್ಮಜ್ಞಾನಂದ

ಉಜಿರೆ : ಜೀವ ಸಂಕುಲಗಳಲ್ಲಿ ಮಾನವ ಭಿನ್ನ ಮತ್ತು ವಿಶೇಷ. ಆದರೆ ಆತ‌ ಮನುಷ್ಯತ್ವ ಮತ್ತು ಸಹಬಾಳ್ವೆಯಿಂದ ಬಾಳಬೇಕು. ನಕಾರಾತ್ಮಕ ಚಿಂತನೆಗಳು ನಮ್ಮ ಸಮಯ ಮತ್ತು ಬುದ್ಧಿಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಸಕಾರಾತ್ಮಕ ಚಿಂತನೆಗಳು ನಮ್ಮ ಮನೋಬಲವನ್ನು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಬ್ರೆಜಿಲ್ ದೇಶದ ರಿಯೋ ದೆ ಜನೈರೋದಲ್ಲಿರುವ ರಾಮಕೃಷ್ಣ ವೇದಾಂತ ಆಶ್ರಮದ ಮುಖ್ಯಸ್ಥ ಸ್ವಾಮಿ ಆತ್ಮಜ್ಞಾನಂದ ಜೀ ಅಭಿಪ್ರಾಯ ಪಟ್ಟರು. ಇವರು ಮಂಗಳೂರಿನ ರಾಮ ಕೃಷ್ಣ ಮಿಷನ್ ಸಹಭಾಗಿತ್ವದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ವಿವೇಕ ಜಾಗೃತ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ, ' ಮೈಂಡ್ ಇಂಜಿನಿಯರಿಂಗ್ - ಡಿಸೈನಿಂಗ್ ದ ಇನ್ನರ್ ಸಾಫ್ಟ್ವೇರ್ ಫಾರ್ ಸಕ್ಸಸ್ ' ಎಂಬ ವಿಚಾರದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಜೀವನದಲ್ಲಿ ವ್ಯಕ್ತಿ ಗೌರವ ಮತ್ತು ವೃತ್ತಿ ಗೌರವದ ಭಾವನೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಸರಿ - ತಪ್ಪಿನ ಅಂತರವನ್ನು ಮನಗಾಣುವ ಯೋಚಾನ ಶಕ್ತಿಯನ್ನು ರೂಢಿಸಿಕೊಳ್ಳುವುದರ ಜೊತೆಗೆ ಸ್ವಂತ ಚಿಂತನೆ ಮತ್ತು ಪ್ರಯತ್ನಗಳಿಂದ ಯಶಸ್ಸಿನ ಮಾರ್ಗದೆಡೆಗೆ ಸಾಗಬೇಕು. ಆಗ ಸ್ವಾಮಿ ವಿವೇಕಾನಂದರ ಚಿಂತನೆಯಂತೆ ಸಮಾಜ ಮತ್ತು ದೇಶ ಸದೃಢವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಮಾರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಬೌದ್ಧಿಕ ಕ್ಷಮತೆಯನ್ನು ವಿಸ್ತರಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಬ್ರೆಜಿಲ್ ದೇಶದ ರಿಯೋ ದೆ ಜನೈರೋದಲ್ಲಿರುವ ರಾಮಕೃಷ್ಣ ವೇದಾಂತ ಆಶ್ರಮದ ಮುಖ್ಯಸ್ಥ ಸ್ವಾಮಿ ಆತ್ಮಜ್ಞಾನಂದ ಜೀರವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿರುವ ಡಾ. ಸತೀಶ್ಚಂದ್ರ ಎಸ್ ಶಾಲು ಹೊದಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಪದವಿ ಪೂರ್ವ ವಸತಿ ಕಾಲೇಜಿನ ಪ್ರಾಂಶುಪಾಲ ಸುನೀಲ್ ಪಂಡಿತ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅಪೇಕ್ಷಾ ಜೈನ್ ನಿರೂಪಿಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ ಐಟಿ ಕಾಲೇಜಿನ ಎನ್.ಎಸ್.ಎಸ್ ಸಂಯೋಜಕ ಮಹೇಶ್ ಪಾಟೀಲ್ ವಂದಿಸಿದರು.

Category
ಕರಾವಳಿ ತರಂಗಿಣಿ