ಮಂಗಳೂರು : ಪವಿತ್ರವಾದ ಮಂಗಳಾದೇವಿಯ ಸಮೀಪ ತಲೆ ಎತ್ತಿ ನಿಂತ ಕುಲಾಲ ಭವನ ಭವಿಷ್ಯದ ಜನಾಂಗಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯವನ್ನು ಹೊಂದಿದ್ದು ಇದು ಭವಿಷ್ಯದ ಭಾರತಕ್ಕೆ ನೀಡಿದಂತ ಅತೀ ಅಮೂಲ್ಯವಾದ ಕೊಡುಗೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ನುಡಿದರು. ಕುಲಾಲ ಸಂಘ ಮುಂಬಯಿ ಹದಿನೈದು ಕೋಟಿಗೂ ಅಧಿಕ ಮೊತ್ತದಲ್ಲಿ ಸಮಾಜ ಬಾಂಧವರ ಹಾಗೂ ದಾನಿಗಳ ಸಹಾಯದಿಂದ ಮಂಗಳೂರಿನ ಮಂಗಳಾದೇವಿ ಸಮೀಪ ನಿರ್ಮಿಸಿದ, ಕುಲಾಲ ಭವನ ಉದ್ಘಾಟನಾ ಸಮಾರಂಭವು ನ. 23ರಂದು ಅಧ್ಯಕ್ಷ ರಘು ಎ.ಮೂಲ್ಯ ರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆದಿದ್ದು ಮುಖ್ಯ ಅತಿಥಿಯಾಗಿ ಮಾತನಾಡಿದ ಯು.ಟಿ. ಖಾದರ್, ಅವರು ಈ ಭವ್ಯ ಕುಲಾಲ ಭವನವು ಕರಾವಳಿ ಕರ್ನಾಟಕದ ಕಿರೀಟಕ್ಕೆ ದೊಡ್ಡ ಗರಿ ಮೂಡಿಸಿದಂತಾಗಿದೆ. ತಮ್ಮ ಕುಲ ಕಸುಬಿನೊಂದಿಗೆ, ವಿವಿಧ ಉದ್ಯೋಗ, ಉದ್ಯಮಗಳ ಮೂಲಕ ತಮ್ಮೊಂದಿಗೆ ತನ್ನ ಸಮುದಾಯವನ್ನು ಬೆಳೆಸುವ ಕಾರ್ಯ ಇತರರಿಗೂ ಮಾದರಿ. ಇದೇ ರೀತಿ ಸಮಾಜದ ಹಿರಿಯರ ಕನಸನ್ನು ನನಸಾಗಿಸುವ ಕಾರ್ಯ ಕುಲಾಲ ಸಮಾಜದಿಂದ ಇನ್ನೂ ನಡೆಯಲಿ ಎಂದು ಶುಭ ಹಾರೈಸಿದರು. ಶ್ರೀಮತಿ ಸುಮಿತ್ರಾ ರಾಜು ಸಾಲಿಯನ್ ಸಭಾಂಗಣ, ಶ್ರೀಮತಿ ಯಶೋಧಾ ಬಾಬು ಸಾಲಿಯನ್ ಬಂಟ್ವಾಳ ವೇದಿಕೆ, ಶ್ರೀಮತಿ ಸರಸ್ವತಿ ವಿಶ್ವನಾಥ್ ಬಂಗೇರಾ ಕುಲಾಯಿ (ಬಾಲ್ಕನಿ), ಶ್ರೀಮತಿ ನಮ್ರತಾ ಜಗದೀಶ್ ಬಂಜನ್ ಬ್ಯಾಂಕ್ವೆಟ್ ಹಾಲ್, ಶ್ರೀಮತಿ ಸಾವಿತ್ರೀ ಪಿ. ಕೆ. ಸಾಲಿಯನ್ ವೇದಿಕೆ, ಶ್ರೀಮತಿ ವಸಂತಿ ಸದಾಶಿವ ಬಂಜನ್ ಆಡಳಿತ ಕಚೇರಿಯನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಓಡಿಯೂರು ಮತ್ತು ಕರ್ಮಯೋಗಿ ಶ್ರೀ ಶ್ರೀ ಮೋಹನ್ ದಾಸ ಪರಮಹಂಸ ಸ್ವಾಮೀಜಿ, ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮನಿಲ, ಇವರು ಇತರ ಗಣ್ಯರೊಂದಿಗೆ ನೆರವೇರಿಸಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಕುಲಾಲ ಶಬ್ಧಕ್ಕೆ ಒಳ್ಳೆಯ ಅರ್ಥವಿದೆ. ಮೂಲ್ಯರು ಅಂದರೆ ಅಮೂಲ್ಯ, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ತ್ಯಾಗ, ವಿಶ್ವಾಸದ ಮೂಲಕ ಈ ಸಮಾಜವು ಎಲ್ಲರ ಪ್ರೀತಿಗೆ ಪಾತ್ರವಾಗಿದ್ದು ಕುಲಾಲ ಭವನ ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆ. ಪ್ರೀತಿ ಇದ್ದಲ್ಲಿ ಸಂಪತ್ತು ಇದೆ. ಅದು ಈ ಸಮಾಜದಲ್ಲಿದೆ ಎಂದರು. ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ಸಮುದಾಯ ಗಳ ಜತೆ ಸೇರುವ ಭಾವನಾತ್ಮಕ ಪ್ರತಿಕ್ರಿಯೆ, ದೈವ- ದೇವರ ಸೇವೆಯ ಮೂಲಕ ಸಮಾಜಕ್ಕೆ ಉಳಿತನ್ನು ಬಯಸುವ ಕುಲಾಲ ಸಮಾಜದ ಸಜ್ಜನಿಕೆಯ ರೂಪವಾಗಿ ಮುಂಬಯಿ ಸಂಘದ ನೆರವಿನಿಂದ ಕುಲಾಲ ಭವನ ನಿರ್ಮಾಣವಾಗಿದ್ದು, ನಮ್ಮ ಇತಿಹಾಸವನ್ನು ಯುವ ಜನಾಂಗಕ್ಕೆ ತಿಳಿಸುವ ಕಾರ್ಯ ನಮ್ಮವರಿಂದಾಗಲಿ ಎಂದರು.
ಕೇಂದ್ರ ಸಚಿವ ಶ್ರೀಪಾದ ಯೆಸ್ಕೊ ನಾಯಕ್, ಮಾತನಾಡುತ್ತಾ ಪ್ರತೀ ವ್ಯಕ್ತಿಯ ಅಭಿವೃದ್ದಿ ಇಡೀ ರಾಷ್ಟದ ಅಭಿವೃದ್ದಿಯಾಗಿದ್ದು, ಕುಲಾಲ ಸಮಾಜವು ಒಗ್ಗಟ್ಟಿನಿಂದ ಕುಲಾಲ ಭವನವನ್ನು ಲೋಕಾರ್ಪಣೆ ಮಾಡುದರೊಂದಿಗೆ ಕಾರ್ಯರೂಪಕ್ಕೆ ತಂದಿಗೆ ಎಂದು ಶುಭ ಹಾರೈಸಿದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸು ನನಸಾಗಲು ಕುಂಬಾರಿಕೆಯ ಕೌಶಲ್ಯವನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಕುಂಬಾರಿಕೆ ಕೇಂದ್ರಗಳನ್ನು ಆರಂಭಿಸಲು ನಾವೆಲ್ಲ ಕೈಜೋಡಿಸಬೇಕು ಎಂದರು. ಮಂಗಳೂರಿನ ವೇದವ್ಯಾಸ ಕಾಮತ್ ಮಾತನಾಡಿ, ದಾನಿಗಳು ತಮ್ಮ ಹೆತ್ತವರ ಹೆಸರಿನಲ್ಲಿ ದೊಡ್ಡ ಮೊತ್ತಗಳನ್ನು ನೀಡುವ ಮೂಲಕ ನಿರ್ಮಾಣಗೊಂಡ ಕುಲಾಲ ಭವನವು ಮಂಗಳೂರಿಗೆ ದೊಡ್ಡ ಹೆಗ್ಗುರುತು. ಇದರ ದಾನಿಗಳೆಲ್ಲ ಅಭಿನಂದನಾರ್ಹರು ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಯಾವುದೇ ಸಮುದಾಯದ ಸಂಖ್ಯೆ ಮುಖ್ಯವಲ್ಲ, ಅದರ ಉದ್ದೇಶ ಮುಖ್ಯ ಎಂಬುದನ್ನು ಕುಲಾಲ ಸಮುದಾಯ ತೋರಿಸಿ ಕೊಟ್ಟಿದೆ. ಕುಲಾಲ ಭವನ ಇಡೀ ಮಂಗಳೂರಿನ ಹಾಗೂ ಪರಿಸರದ ಎಲ್ಲರಿಗೂ ಪ್ರಯೋಜನಕಾರಿಯಾಗಲಿ ಎಂದರು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಮಂಗಳಾದೇವಿ ದೇವಸ್ಥಾನದ ಟ್ರಸ್ಟಿ ಅರುಣ್ ಕುಮಾರ್ ಐತಾಳ್, ಮಾರ್ಗನ್ಸ್ ಗೇಟ್ ಸೇಂಟ್ ರಿಚರ್ಡ್ ಧರ್ಮ ಕ್ರೋಸ್ತಾ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ.ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮುಂಬಯಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯ ಕಾಂತ ಜಯ ಸುವರ್ಣ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪಕ ಜಯಕೃಷ್ಣ ಎ.ಶೆಟ್ಟಿ, ಬಂಟರ ಸಂಘ ಮುಂಬಯಿಯ ಎಸ್ ಎಂ ಶೆಟ್ಟಿ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ಮುಂಬಯಿಯ ಉದ್ಯಮಿ, ಸಮಾಜ ಸೇವಕ ರವೀಂದ್ರನಾಥ್ ಭಂಡಾರಿ, ದಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ನಾಸಿಕ್ ಉದ್ಯಮಿಗಳಾದ ಸಂಜೀವ ಕೆ.ಬಂಗೇರ, ರಮಾನಂದ ಬಂಗೇರ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಎಡಪದವು, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ಕಾರ್ಯಾಧ್ಯಕ್ಷ ಎನ್ ಟಿ ಪೂಜಾರಿ, ದ.ಕ. ಜಿಲ್ಲಾ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮನ್ನಿಪ್ಪಾಡಿ, ಬರ್ಕೆ ಫ್ರೆಂಡ್ಸ್ ಅಧ್ಯಕ್ಷ ಯಜೇಶ್ ಬರ್ಕೆ, ಸಂಘದ ಪದಾಧಿಕಾರಿ ಗಳು ಉಪಸ್ಥಿತರಿದ್ದು ಶುಭ ಹಾರೈಸಿದರು. ಕುಲಾಲ ಸಂಘ ಮುಂಬಯಿಯ ಗೌರವಾಧ್ಯಕ್ಷರಾದ ಪಿ. ದೇವದಾಸ್ ಎಲ್. ಕುಲಾಲ್, ದಿಕ್ಸೂಚಿ ಭಾಷಣ ಮಾಡಿದರು.
ಬೆಳಿಗ್ಗೆ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ, ವೈಭವದ ಮೆರ ವಣಿಗೆ ಪ್ರಾರಂಭವಾಯಿತು. ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗ, ವೀರನಾರಾಯಣ ಮಾತೃ ಮಂಡಳಿ ಹಾಗೂ ಸ್ವಾಮಿಲ ಪದವು ಶ್ರೀ ಮಲ್ಲಿಕಾರ್ಜುನ ಸ್ವಾಮಿ ತಂಡದಿಂದ ಕುಣಿತ ಭಜನೆ, ಚೆಂಡೆ -ವಾದ್ಯ ಮೇಳ, ಗೊಂಬೆ-ಕೀಲು ಕುದುರೆ, ಶಿಸ್ತಿನಿಂದ ಸಾಗಿದ ಎನ್‌ಸಿಸಿ ಕೆಡೆಟ್ ಮಕ್ಕಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿದ್ದರು.