image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಡಪದವಿನಲ್ಲಿ ತಲವಾರ್ ದಾಳಿ ನಡೆಸಿದ ನಾಲ್ವರು ಆರೋಪಿಗಳ ಬಂಧನ

ಎಡಪದವಿನಲ್ಲಿ ತಲವಾರ್ ದಾಳಿ ನಡೆಸಿದ ನಾಲ್ವರು ಆರೋಪಿಗಳ ಬಂಧನ

ಮಂಗಳೂರು : ಎಡಪದವು ಎಂಬಲ್ಲಿ ನಿನ್ನೆ ಯುವಕನೊಬ್ಬನ ಮೇಲೆ ತಲವಾರ್ ದಾಳಿ ನಡೆಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಮಂಗಳೂರು ಬಂದರು ನಿವಾಸಿ ಸಿನಾನ್, ವೇಣೂರು ನಿವಾಸಿ ಇರ್ಷಾದ್, ವಾಮಂಜೂರು ನಿವಾಸಿ ಸುಹೈಲ್ ಅಕ್ರಮ್ ಮತ್ತು‌ ವಾಮಂಜೂರು ಪಿಲಿಕುಳ ನಿವಾಸಿ ನಿಸಾನ್ ಎಂದು ಗುರುತಿಸಲಾಗಿದೆ. ಬಂಧಿತರ ಪೈಕಿ ಮಂಗಳೂರು ಬಂದರು ನಿವಾಸಿ ಸಿನಾನ್ ನನ್ನು ಸಾರ್ವಜನಿಕರು ಸ್ಥಳದಲ್ಲೇ ಪೊಲೀಸರಿಗೆ ಒಪ್ಪಿಸಿದ್ದರು. ಉಳಿದಂತೆ ವೇಣೂರು ನಿವಾಸಿ ಇರ್ಷಾದ್ ನನ್ನು ಬಜ್ಪೆ ಪೊಲೀಸರು ಬಂಧಿಸಿದ್ದರು. ಜೊತೆಗೆ ವಾಮಂಜೂರು ನಿವಾಸಿ ಸುಹೈಲ್ ಅಕ್ರಮ್ ಮತ್ತು‌ ವಾಮಂಜೂರು ಪಿಲಿಕುಳ ನಿವಾಸಿ ನಿಸಾನ್ ನನ್ನು ಮಂಗಳೂರು ಸಿಸಿಬಿ ಪೊಲೀಸರು ಘಟನೆ ನಡೆದ 4 ಗಂಟೆಯ ಒಳಗಾಗಿ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರ ಪೈಕಿ ಅಕ್ರಮ್ ಮತ್ತು‌ ನಿಸಾನ್ ವಿರುದ್ಧ ಗಾಂಜಾ ಸಂಬಂಧಿಸಿದ ಪ್ರಕರಣಗಳು ಇರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೊಲೆ ಯತ್ನ ಪ್ರಕರಣದ ಜೊತೆಗೆ ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಆರೋಪಿ ಸಿನಾನ್ ವಿರುದ್ಧ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಕಳವು, ಗಾಂಜಾ ಸಾಗಾಟ, ಮಾರಾಟ ಹಾಗೂ ಕೊಲೆಯತ್ನ ಸೇರಿದಂತೆ 7 ಪ್ರಕರಣಗಳು ದಾಖಲಾಗಿವೆ. ಇರ್ಷಾದ್, ಅಕ್ರಮ್ ಮತ್ತು‌ ನಿಸಾನ್ ವಿರುದ್ಧವೂ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕಳವು , ಗಾಂಜಾ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗಿವೆ‌ ಎಂದು ತಿಳಿದು ಬಂದಿದೆ. 

ಮಂಗಳೂರು ಹೋಟೆಲ್ ಎಡಪದವು ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಅವರು ಪೂಪಾಡಿ ಕಲ್ಲುವಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ಸಂದರ್ಭ ಒಂದೇ ದ್ವಿಚಕ್ರ ವಾಹನದಲ್ಲಿ ನಾಲ್ಕು ಮಂದಿ ಚೂರಿ ಹಿಡಿದು ಸಂಚರಿಸುತ್ತಿರುವುದನ್ನು ಗಮನಿಸಿ ಅದನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಲು‌ ಮುಂದಾಗಿದ್ದಾರೆ. ಇದನ್ನು ಕಂಡ ಆರೋಪಿಗಳು ರಸ್ತೆಯಲ್ಲಿ ಅಖಿಲೇಶ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಖಿಲೇಶ್ ಕೈಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಸ್ಥಳೀಯರು ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Category
ಕರಾವಳಿ ತರಂಗಿಣಿ