ಮಂಗಳೂರು: ಎಂಟು ಶತಕಗಳಿಗೂ ಮೀರಿದ ಇತಿಹಾಸವುಳ್ಳ, ಚಾರಿತ್ರಿಕ ಹಿನ್ನಲೆಯುಳ್ಳ ದೇವಸ್ಥಾನವೇ ಶ್ರೀ ಕುರು ಅಂಬಾ ರಾಜರಾಜೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ಗಣಪತಿ, ಸುಬ್ರಹ್ಮಣ್ಯ, ನಾಗಸನ್ನಿಧಿ, ಗುಳಿಗನೇ ಮೊದಲಾದ ಸಪರಿವಾರ ದೇವರುಗಳೊಂದಿಗೆ ಕ್ಷೇತ್ರ ಸಾನಿಧ್ಯವನ್ನು ವೃದ್ಧಿಸುವ ನಮ್ಮಮ್ಮ ಭಜಕರ ಇಷ್ಟಾರ್ಥವನ್ನು ಪೂರೈಸಿ, ಅಭಯಪ್ರದಾಯಕಿಯಾಗಿ ಮೆರೆಯುತ್ತಿದ್ದಾಳೆ ನಮ್ಮ ಕ್ಷೇತ್ರವಾಸಿನಿ ರಾಜರಾಜೇಶ್ವರೀ ತಾಯಿ. ಕ್ಷೇತ್ರದಲ್ಲಿ ವಿಶೇಷ ಸಂದರ್ಭದಲ್ಲಿ, ದಾನಿಗಳ ಸಹಕಾರದಿಂದ ಅನ್ನದಾನ ವ್ಯವಸ್ಥೆಯೂ ನಿರಾತಂಕವಾಗಿ ಜರಗುತ್ತಾ ಅನ್ನಪೂರ್ಣೇ ಸದಾಪೂರ್ಣೇ ಯಾಗಿದ್ದಾಳೆ ಮಹಾತಾಯಿ, ತೀರ್ಥಭಾವಿ ವಿಶೇಷವಾಗಿ ಸದಾಕಾಲ ಅಂತರ್‌ಂಗೆಯಂತೆ ಇರುತ್ತಾಳೆ. ಕ್ಷೇತ್ರದ ಅನ್ನಛತ್ರ, ಸಾಂಸ್ಕೃತಿಕ ರಂಗ ವೇದಿಕೆಗಳ ನಿರ್ಮಾಣ ಕಾರ್ಯ ಮಹಾದಾನಿಗಳ ಸಹಕಾರದಿಂದ ಜರಗುತ್ತಿದ್ದು ಕ್ಷೇತ್ರವು ಅಭಿವೃದ್ಧಿಯ ಪಥದಲ್ಲಿದೆ. ಆದರೂ ಇನ್ನೂ ಇನ್ನೂ ಭಜಕರು ಸಹಾಯಹಸ್ತ ನೀಡಬೇಕಾದ ಅಗತ್ಯ ಇದೆ ಎಂದರು ಶ್ರೀ ಕುರು ಅಂಬಾ ರಾಜರಾಜೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದೇರೆಬೈಲ್ ಮಂಗಳೂರು ಇದರ ಆಡಳಿತ ಮೊಕ್ತೇಸರಾದ ಪಿ ಮಹಾಬಲ ಚೌಟ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಕ್ಷೇತ್ರದಲ್ಲಿ ಅಮ್ಮನ ಅನುಗ್ರಹದಂತೆ ಅನೇಕ ರೀತಿಯ ಪವಾಡ ಸದೃಶ ಕಾರ್ಯಕ್ರಮಗಳು ಜರಗಿ ದೇಶ-ವಿದೇಶಗಳ ಭಕ್ತರನ್ನು ತನ್ನತ್ತ ಸೆಳೆದು ಸೇವೆಗೊಳ್ಳುತ್ತಿದ್ದಾಳೆ ಶ್ರೀದೇವಿ. ಬೇರೆ ಬೇರೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಸದಾ ನಡೆಯುತ್ತಿರುತ್ತವೆ. ವೇ|| ಮೂ।। ವಿಠಲದಾಸ ತಂತ್ರಿ, ದೇರೆಬೈಲ್‌ರವರಿಂದ ಪುನಃ ಪ್ರತಿಷ್ಠಾಪಿಸಲ್ಪಟ್ಟ ಅಮ್ಮ, ಇದೀಗ ಪ್ರಧಾನ ಅರ್ಚಕ ಶ್ರೀ ರವೀಶ ರಾವ್‌ರವರ ನಿತ್ಯಕೈಂಕರ್ಯದಲ್ಲಿ ಸೇವೆಗೊಳ್ಳುತ್ತಿದ್ದಾಳೆ. ನವರಾತ್ರಿ ಉತ್ಸವ, ಶ್ರೀ ಚಕ್ರಪೂಜೆ, ಸಾಮೂಹಿಕ ಶನಿಪೂಜೆ, ಸತ್ಯನಾರಾಯಣ ಪೂಜೆ, ಚಂಡಿಕಾಯಾಗ, ವಾರ್ಷಿಕ ಜಾತ್ರೆಗಳು ಇಲ್ಲಿ ಸಾಂವತ್ಸರಿಕವಾಗಿ ನಡೆಯುವ ವಿಶೇಷ ಕಾರ್ಯಕ್ರಮಗಳು ಈ ಬಾರಿಯ ಶರನ್ನವರಾತ್ರಿ ಉತ್ಸವದ ವಿಶೇಷತೆಗಳು ಇಂತಿವೆ. 03-10-2024ನೇ ಗುರುವಾರದಿಂದ ಆರಂಭಿಸಿ 12-10-2024ರ ಶನಿವಾರದವರೆಗೆ ನಡೆಯುತ್ತವೆ. ಅಕ್ಟೋಬರ್ 03 ರ ಬೆಳಿಗ್ಗೆ ಉಷಃಕಾಲದಲ್ಲಿ ಕೊಪ್ಪರಿಗೆ ಇಟ್ಟು ಉದ್ಘಾಟನೆಯಾದರೆ, ಅಕ್ಟೋಬರ್ 12ರಂದು ಸಮಾವರ್ತನೆಯಾಗಿ ಮುಕ್ತಾಯಗೊಳ್ಳುತ್ತವೆ ಎಂದರು.
ಅಕ್ಟೋಬರ್ 03 ರ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಂಗಳೂರಿನ ನೂತನ ಮೇಯರ್ ಶ್ರೀ ಮನೋಜ್ ಕುಮಾರ್ ಕೋಡಿಕಲ್ ರವರು ಉದ್ಘಾಟಿಸಲಿದ್ದಾರೆ. ಯಕ್ಷಗಾನ ಬಯಲಾಟ, ಖ್ಯಾತ ಕಲಾವಿದರಿಂದ ತಾಳಮದ್ದಳೆ, ನೃತ್ಯ, ಕಥಕ್ ನೃತ್ಯ, ವಿಠಲ್‌ನಾಯಕ್‌ರಿಂದ ಗೀತಾ ಸಾಹಿತ್ಯ ಸಂಭ್ರಮ, ಕುಣಿತ ಭಜನೆ, ಹರಿಕಥೆ, ಸಂಗೀತ ನೃತ್ಯ ಸಂಭ್ರಮ, ಸ್ಥಳೀಯ ಪ್ರತಿಭಾ ಪ್ರದರ್ಶನ ಹೀಗೆ ಅನೇಕ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ನಿತ್ಯವೂ ಜರಗಲಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎನ್. ಡಾ। ಉಮ್ಮಪ್ಪ ಪೂಜಾರಿ, ಮೋಹನ್ ಶೆಟ್ಟಿ, ಸಾಂಸ್ಕೃತಿಕ . ರಾಯಭಾರಿ ವರ್ಕಾಡಿ ಶ್ರೀ ರವಿ ಅಲೆವೂರಾಯ ಉಪಸ್ಥಿತರಿದ್ದರು