ಗಂಗೊಳ್ಳಿ: ಸೂಕ್ತ ನಿರ್ವಹಣೆ ಇಲ್ಲದೇ ದುರ್ವಾಸನೆಯಿಂದ ಕೂಡಿ ಸಾಂಕ್ರಮಿಕ ರೋಗಗಳ ಅಡಗು ತಾಣವಾಗಿರುವ ಬಂದರು ರಸ್ತೆಯ ಸಮೀಪದ ಚರಂಡಿ (ಪಂಜುರ್ಲಿ ತೋಡು) ಯನ್ನು ಸ್ವಚ್ಛಗೊಳಿಸಿ, ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಬೇಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಂಗಳವಾರ ಅಲ್ಲಿನ ನಿವಾಸಿಗಳು, ವಿವಿಧ ಸಂಘ-ಸಂಸ್ಥೆಗಳ ಒಕ್ಕೂಟ ಗಂಗೊಳ್ಳಿ ವತಿಯಿಂದ ಮನವಿ ಸಲ್ಲಿಸಿ, ಒತ್ತಾಯಿಸಿದರು. ಈ ತೋಡು ನಿರ್ವಹಣೆ ಕೊರತೆಯಿಂದ ಕಸದ ತೊಟ್ಟಿಯಂತಾಗಿದೆ. ದುರ್ನಾತದಿಂದ ಇಲ್ಲಿನ ಆಸುಪಾಸಿನ ಮನೆಯವರು ನಿತ್ಯ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ಚರಂಡಿಯ ಅಭಿವೃದ್ಧಿಗಾಗಿ ಹಲವಾರು ವರ್ಷಗಳಿಂದ ಇಲ್ಲಿನ ನಾಗರಿಕರು ಹೋರಾಟ ಮಾಡುತ್ತಿದ್ದಾರೆ. ಸಣ್ಣ ಮಕ್ಕಳಿಗೆ ಆರೋಗ್ಯ ಸಮಸ್ಯೆ, ಸಾಂಕ್ರಮಿಕ ರೋಗದ ಅಪಾಯವೂ ಇದೆ. ಈ ಚರಂಡಿಯು ಶಾಲೆಯಿಂದ ಕೇವಲ 100 ಮೀ. ದೂರದಲ್ಲಿದೆ. ಕೊಳಚೆ ಚರಂಡಿಯಿಂದ ಇಲ್ಲಿನ ವ್ಯಾಪಾರಸ್ಥರು, ದಾರಿ ಹೋಕ ಮೀನುಗಾರರಿಗೂ, ಕೂಲಿ ಕಾರ್ಮಿಕರಿಗೂ ತೊಂದರೆ ಉಂಟಾಗುತ್ತಿದೆ.
ಇಲ್ಲಿಯೇ ಇತಿಹಾಸವಿರುವ ಪಂಜುರ್ಲಿ ದೈವಸ್ಥಾನವಿದೆ. ಈ ಕೊಳಚೆ ಚರಂಡಿಗೆ ಆಸ್ಪತ್ರೆಯ ರಾಸಾಯನಿಕ, ಔಷಧೀಯ ತ್ಯಾಜ್ಯಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಕೊಳೆತ ಪ್ರಾಣಿಗಳ ತ್ಯಾಜ್ಯಗಳು, ಇನ್ನಿತರ ವಿಷಪೂರಿತ ರಾಸಾಯನಿಕ ತ್ಯಾಜ್ಯಗಳನ್ನು ತಂದು ಹಾಕುತ್ತಿದ್ದಾರೆ. ಈ ಚರಂಡಿಯ ವಿಷಪೂರಿತ ಕೊಳಚೆ ನೀರು ನೇರವಾಗಿ ಪಂಚಗಂಗಾವಳಿಯ ನದಿಗೆ ಸೇರುತ್ತಿದ್ದು, ಇದರಿಂದ ಮೀನಿನ ಸಂತತಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಒಳನಾಡು ಮೀನುಗಾರಿಕೆಗೆ ಕ್ಷಾಮ ಬಂದಿರುವುದಕ್ಕೆ ಇದೂ ಕಾರಣವಾಗಿದೆ. ಇಲ್ಲಿನ ಚರಂಡಿಯ ಸುತ್ತಮುತ್ತ ನೆಲೆಸಿರುವ ಮನೆಗಳಿಗೆ ಸರಿಯಾದ ರಸ್ತೆ ಸಂಪರ್ಕವೂ ಇಲ್ಲದೇ ತೊಂದರೆಯಾಗುತ್ತಿದೆ. ಚರಂಡಿಯ ಒಂದು ಬದಿ ರಸ್ತೆಯನ್ನೂ ನಿರ್ಮಿಸಿದರೆ ಅನುಕೂಲವಾಗಲಿದೆ. ಈ ಮೊದಲು 90 ಲಕ್ಷ ರೂ. ಅನುದಾನ ಬಂದರೂ, ಕಾರಣಾಂತರಗಳಿಂದ ಹಿಂದಕ್ಕೆ ಹೋಗಿದೆ. ಮತ್ತೆ ಇದಕ್ಕಾಗಿ ಅನುದಾನ ಒದಗಿಸಬೇಕಾಗಿ ಸಂಸದರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ತೋಡಿನ ಸಮಸ್ಯೆ ಬಗ್ಗೆ ನನಗೆ ಅರಿವಿದೆ. ಇದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆಯೂ ಗಮನದಲ್ಲಿದೆ. ಆದರೆ ಇದು ಮೀನುಗಾರಿಕೆ ಹಾಗೂ ಬಂದರು ಇಲಾಖೆಯಿಂದ ಮಾಡಲು ಸಾಧ್ಯವಿಲ್ಲ. ರಾಜ್ಯ ಸರಕಾರದ ಯಾವುದಾದರೂ ಯೋಜನೆಯ ಮೂಲಕವೇ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಯಾವುದಾದರೂ ಅನುದಾನವನ್ನು ತಂದು ಈ ತೋಡಿನ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದರು.