ಮಂಗಳೂರು: ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ (ರಿ) ಕರ್ನಾಟಕ ಇದರ ಆಯೋಜನೆಯಲ್ಲಿ ಯೋಗೋತ್ಸವ “ಯೋಗ ಏಕಾಹ-2024" ವಿನೂತನ ಕಾರ್ಯಕ್ರಮ ಸೆ.29ರ ರವಿವಾರ ಸಂಘ ನಿಕೇತನದಲ್ಲಿ ಜರುಗಲಿದೆ” ಎಂದು ಸಂಘಟನೆಯ ಅಧ್ಯಕ್ಷ ಏಕನಾಥ ಬಾಳಿಗ, ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನವು ಪ್ರತಾಪನಗರದ ಕೇಶವ ಯೋಗ ಕೇಂದ್ರದೊಂದಿಗೆ ಜಂಟಿಯಾಗಿ ಒಂದು ದಿನದ ಯೋಗಾಸನ ಪ್ರದರ್ಶನದ ಯೋಗೋತ್ಸವ ಕಾರ್ಯಕ್ರಮ – “ಯೋಗ ಏಕಾಹ - 2024” ಆಯೋಜಿಸಿದೆ. ಜಿಲ್ಲೆಯ12 ಪ್ರತಿಷ್ಠಿತ ಯೋಗಾಭ್ಯಾಸವನ್ನು ಕಲಿಸುವ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತೀ ಸಂಸ್ಥೆಯ ತಂಡವು 30 ನಿಮಿಷಗಳ ಕಾಲ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಲಿದ್ದಾರೆ. ಅಂತೆಯೇ, 8 ಮಂದಿ ನುರಿತ ಹಾಗೂ ಹಲವು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ ಯೋಗಪಟುಗಳು ವೈಯಕ್ತಿಕ ಯೋಗಾಸನ ಪ್ರದರ್ಶನವನ್ನೂ ಮಾಡಿತೋರಿಸಲಿದ್ದಾರೆ. ಇದಲ್ಲದೆ ಸೂರ್ಯ ನಮಸ್ಕಾರ ಹಾಗೂ ಯೋಗಗುಚ್ಛಗಳೂ ಯೋಗಜೀವಿ ದರ್ಶಕರಿಗೆ ಹಬ್ಬ ನೀಡಲಿರುವುದು“ ಎಂದರು.
ಬೆಳಿಗ್ಗೆ 6.00ರಿಂದ ಆರಂಭಗೊಂಡು ಸಂಜೆ 6.00ರ ವರೆಗೆ ನಡೆಯುವ ಈ ಕಾರ್ಯಕ್ರಮವು ಸ್ಪರ್ಧಾತ್ಮಕವಾಗಿರದೆ ಉತ್ಕೃಷ್ಟ ಮಟ್ಟದ ಹಾಗೂ ಕೇವಲ ಪ್ರದರ್ಶನದ ಮಹತ್ವ ಹೊಂದಿರುತ್ತದೆ. ಪ್ರತಿಷ್ಠಾನ ಮತ್ತು ಕೇಶವ ಯೋಗ ಕೇಂದ್ರವು ಈ ವಿನೂತನ ಕಾರ್ಯಕ್ರಮವನ್ನು ಎರಡನೇ ಬಾರಿಗೆ ನಡೆಸುತ್ತಿವೆ. ವಿವಿಧ ಸಂಸ್ಥೆಗಳು ಒಂದೇ ವೇದಿಕೆಯ ಮೇಲೆ ಪ್ರದರ್ಶನಾತ್ಮಕವಾಗಿ ಆಸನಗಳನ್ನು ಮಾಡಿ ತೋರಿಸುವುದು ಒಂದು ವಿಶಿಷ್ಟ ಪ್ರಯತ್ನ, ಅದಲ್ಲದೆ, ಹೆಚ್ಚು ಜನರಿಗೆ ಈ ಮೂಲಕ ಯೋಗಾಭ್ಯಾಸದಲ್ಲಿ ಆಸಕ್ತಿ ಮೂಡುವಂತೆ ಮಾಡುವುದು ನಮ್ಮ ಉದ್ದೇಶ. ಸುಮಾರು 150-175 ಮಂದಿ ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು ಈ ಯೋಗಪಟುಗಳಿಗೆ ಭಾಗವಹಿಸುವಿಕೆಯ ಪ್ರಶಸ್ತಿ ಪತ್ರ,ಸಂಸ್ಥೆಗಳಿಗೆ ಸ್ಮರಣಿಕೆ ನೀಡಲಾಗುವುದು. ಇದಲ್ಲದೆ ಸುಮಾರು 500 -750 ಮಂದಿ ವೀಕ್ಷಕರೂ ಈಕಾರ್ಯಕ್ರಮಕ್ಕೆ ಸಾಕ್ಷಿಗಳಾಗಲಿರುವರು“ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಧನಂಜಯ ಕೆ., ಯೋಗೀಶ್ ಶೆಟ್ಟಿ ಕಾವೂರು, ಜಯಲಕ್ಷ್ಮಿ ಚಂದ್ರಹಾಸ್, ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.