ಉಡುಪಿ: ಪ್ರಧಾನಿ ನರೇಂದ್ರ ಮೋದಿ ನ.28ರಂದು ಉಡುಪಿಗೆ ಆಗಮಿಸುತ್ತಿದ್ದು ಅಕ್ಷರಶಃ ಉಡುಪಿ ಖಾಕಿ ಭದ್ರ ಕೋಟೆಯಾಗಿ ಮಾರ್ಪಾಡಾಗಿದೆ. ಶುಕ್ರವಾರ ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದಿಂದ ಕಲ್ಸಂಕದ ವರೆಗೂ ಪ್ರಧಾನಿ ರೋಡ್‌ಶೋ ನಡೆಯಲಿದೆ. ಎರಡು ಕಡೆಗಳಲ್ಲೂ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಈ ರಸ್ತೆಯ ಎರಡೂ ಬದಿಗಳಲ್ಲಿರುವ ಅಂಗಡಿ ಮಾಲಕರಿಗೆ ಅಂದು ಅಂಗಡಿ ತೆರೆಯದಂತೆ ಸೂಚನೆಯನ್ನು ಜಿಲ್ಲಾಡಳಿತ ರವಾನಿಸಿದೆ. ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಶಿಷ್ಟಾಚಾರ ಪರಿಪಾಲನೆಗೆ ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಿದೆ. ಎಲ್ಲಿಯೂ ಯಾವುದೇ ರೀತಿಯಲ್ಲೂ ವ್ಯತ್ಯಾಸ, ಸಮಸ್ಯೆಗಳು ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ.
ನ.28ರಂದು ನಗರದಲ್ಲಿ ಯಾವುದೇ ಕಾಮಗಾರಿ, ಹೊಂಡತೋಡುವುದು ಇತ್ಯಾದಿಗಳನ್ನು ಮಾಡಬಾರದು. ಹಾಗೆಯೇ ಕಾರ್ಯಕ್ರಮ ನಡೆಯುವ ದಿನ ಸಹಿತ ಮೊದಲೆರೆಡು ದಿನ ಪರವಾನಿಗೆ ಇಲ್ಲದೇ ದ್ರೋಣ್ ಹಾರಿಸುವಂತಿಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲೂ ತುಸು ವ್ಯತ್ಯಾಸ ಆಗಲಿರುವುದರಿಂದ ನ.28ಕ್ಕೆ ಸೀಮಿತವಾಗಿ ಉಡುಪಿ ನಗರ, ಮಲ್ಪೆ ಹಾಗೂ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.
ಲಕ್ಷಕಂಠ ಗೀತಾ ಪಾರಾಯಣದ ಬೃಹತ್ ವೇದಿಕೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಪಾರಾಯಣಕ್ಕೆ ಕುಳಿತುಕೊಳ್ಳಲು ಅಗತ್ಯ ಮ್ಯಾಟ್‌ಗಳ ಅಳವಡಿಕೆಯನ್ನು ಮಾಡಲಾಗುತ್ತಿದೆ. ವೇದಿಕೆ ಎಷ್ಟು ಎತ್ತರ ಇರಬೇಕು ಮತ್ತು ಶೂನ್ಯ ವಲಯ ನಿರ್ಮಾಣ ಇತ್ಯಾದಿಗಳು ಎಸ್‌ಪಿಜಿ ಸೂಚನೆಯಂತೆ ನಡೆಯುತ್ತಿದೆ. ನಗರದಲ್ಲಿ ಕೇಸರಿ ಬಾವುಟ ಹಾರಾಟ ಆರಂಭವಾಗಿದೆ.