ಉಡುಪಿ : ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನ.28ರಂದು ನಡೆಯುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಪರಿಶೀಲನೆಗಾಗಿ ಸೋಮವಾರ (ನ.24) ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಭೇಟಿ ನೀಡಲಿದೆ. ಪ್ರಧಾನಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ವೇಳಾಪಟ್ಟಿ ಪ್ರಕಾರ, ಆದಿ ಉಡುಪಿ ಹೆಲಿಪ್ಯಾಡ್ ನಿಂದ ಶ್ರೀಕೃಷ್ಣ ಮಠ ಪರಿಸರ, ಪಾರ್ಕಿಂಗ್ ಪ್ರದೇಶ ಸಮೀಪದಲ್ಲಿ ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದ ಸ್ಥಳ ವೀಕ್ಷಣೆ ನಡೆಸಲಿದ್ದಾರೆ. ಅಲ್ಲದೇ ಪ್ರಧಾನಮಂತ್ರಿ ಭೇಟಿಯ ಭದ್ರತಾ ಶಿಷ್ಟಾಚಾರ ಕೆಲವು ಗೌಪ್ಯವಾಗಿರುತ್ತದೆ.
ಪ್ರಧಾನಮಂತ್ರಿಯವರ ಪ್ರಯಾಣ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಬೇಕಾದ ದಾರಿ, ಭದ್ರತಾ ವಿಶ್ಲೇಷಣೆ, ಅಪಾಯಕಾರಿ ಅಂಶಗಳನ್ನು ಎಎಸ್ ಎಲ್ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಭದ್ರತಾ ವಿಷಯದ ಜತೆಗೆ ಹವಾಮಾನದ ಅಂಶಗಳನ್ನೂ ಪರಿಗಣಿಸಲಾಗುತ್ತದೆ. ಅಗ್ನಿ ಸುರಕ್ಷತೆ, ವಾತಾವರಣ, ಇತರೆ ಅಪಾಯಗಳ ಕುರಿತು ಎಸ್ ಪಿಜಿ ಪರಿಶೀಲನೆ ನಡೆಸುತ್ತದೆ. ಈ ಸಭೆಯಲ್ಲಿ ಪ್ರಧಾನಮಂತ್ರಿಯವರ ಭೇಟಿಯ ಪ್ರತಿ ನಿಮಿಷದ ವಿವರವನ್ನು ಚರ್ಚಿಸಲಾಗುತ್ತದೆ, ಅದರಲ್ಲಿ ಅವರು ಹೇಗೆ ಆಗಮಿಸುತ್ತಾರೆ (ವಿಮಾನ ಅಥವಾ ರಸ್ತೆಯ ಮೂಲಕ) ಮತ್ತು ಅವರು ನಿಗದಿಪಡಿಸಿದ ಸ್ಥಳವನ್ನು ಹೇಗೆ ತಲುಪುತ್ತಾರೆ ಮತ್ತು ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಪ್ರಧಾನಿ ದೋಣಿಯಲ್ಲಿ ಪ್ರಯಾಣಿಸುವ ಸಾಧ್ಯತೆಯಿದ್ದರೆ, ದೋಣಿಯ ರಚನೆ ಮತ್ತು ಸುರಕ್ಷತೆಯನ್ನು ಅದರ ಪ್ರಮಾಣಪತ್ರದ ಮೇಲೆ ದೃಢೀಕರಿಸಲಾಗುತ್ತದೆ.