ಮಂಗಳೂರು : ಕರುನಾಡಿನ ಜಾನಪದ ಕಲೆ ಕಂಬಳ ರಾಜ್ಯ ಸರಕಾರದ ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದಿದ್ದು, ಈ ಕ್ರೀಡೆಗೆ ಸರಕಾರ 5 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಡಾ.ಐಕಳಬಾವ ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ವರ್ಷ 25 ಜೋಡುಕರೆ ಕಂಬಳಗಳು' ನಡೆಯಲಿದ್ದು ಇದಕ್ಕೆ ಮುಂದಿನ ಬಜೆಟ್ ನಲ್ಲಿ 5 ಕೋಟಿ ರೂ. ಮೀಸಲಿಡಬೇಕು. ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ 10 ಕಂಬಳಗಳಿಗೆ ತಲಾ 5 ಲಕ್ಷ ರೂ.ಗಳಂತೆ ಒಟ್ಟು 50 ಲಕ್ಷ ರೂ. ಬಿಡುಗಡೆ ಮಾಡಿತ್ತು. ಇದನ್ನು 20 ಕಂಬಳಗಳಿಗೆ ಹಂಚಲಾಗಿದೆ. ಕ್ರೀಡಾ ಇಲಾಖೆ ಪ್ರತಿ ಕಂಬಳಕ್ಕೆ 2 ಲಕ್ಷ ರೂ. ಬಿಡುಗಡೆ ಮಾಡಿತ್ತು. ಒಂದು ಕಂಬಳ ಆಯೋಜನೆಗೆ 40ರಿಂದ 50 ಲಕ್ಷ ರೂ. ವೆಚ್ಚವಾಗುತ್ತದೆ. ಚಿನ್ನವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಆದರೆ ಚಿನ್ನದ ದರ ವಿಪರೀತ ಹೆಚ್ಚಾಗಿರುವುದರಿಂದಲೂ ಹೊರೆಯಾಗಿದೆ. ಕಂಬಳದಿಂದ ಕ್ರೀಡೆ ಮತ್ತು ಪ್ರವಾಸೋದ್ಯಮ ಇಲಾಖೆಗಳಿಗೆ ಪ್ರಯೋಜನವಾಗುತ್ತಿರುವ ಕಾರಣ ಪ್ರತಿ ಕಂಬಳಕ್ಕೆ ಕನಿಷ್ಠ 5 ಲಕ್ಷ ರೂ. ಪ್ರೋತ್ಸಾಹಧನ ಬಿಡುಗಡೆ ಮಾಡಬೇಕೆಂದರು ಒತ್ತಾಯ ಮಾಡಿದರು.
ಕಂಬಳಗಳನ್ನು ನಡೆಸಲು ಅಸೋಸಿಯೇಶನ್ ಬೈಲಾ ರಚಿಸಿದ್ದು ಕಂಬಳ ಇನ್ನಷ್ಟು ವ್ಯವಸ್ಥಿತವಾಗಿ ನಡೆಯಬೇಕು. 24 ಗಂಟೆಗಳ ಒಳಗೆ ಮುಕ್ತಾಯಗೊಳ್ಳಬೇಕು. ಸಮಯ ಪಾಲನೆ ಮಾಡಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಕೋಣಗಳಿಗೆ ಯಾವುದೇ ರೀತಿಯ ಹಿಂಸೆಯನ್ನು ನೀಡಬಾರದು ಎಂದು ಕೂಡ ಸೂಚಿಸಲಾಗಿದೆ. ರಾತ್ರಿ 108 ಅನಂತರ ಧ್ವನಿವರ್ಧಕ ಬಳಕೆಯ ನಿಯಮಗಳನ್ನು ಸಂಘವು ಕಟ್ಟುನಿಟ್ಟಾಗಿ ಪಾಲಿಸಲಿದೆ. ರಾತ್ರಿ 10 ಗಂಟೆಯ ಅನಂತರ ಧ್ವನಿವರ್ಧಕದ ಶಬ್ದವನ್ನು ಕಂಬಳ ಕರೆ ಒಳಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಈ ವರ್ಷದಿಂದ ಸಬ್ ಜೂನಿಯರ್ ವಿಭಾಗಕ್ಕೆ ಅವಕಾಶವಿರುವುದಿಲ್ಲ. ಇದರಿಂದಾಗಿ ಸುಮಾರು ಮೂರು ಗಂಟೆಗಳ ಸಮಯ ಉಳಿಸಲು ಸಾಧ್ಯವಾಗಲಿದೆ. ಸಬ್ ಜೂನಿಯರ್ ಕೋಣಗಳಿಗೆ ತರಬೇತಿ ಸಿಗುವಂತಾಗಲು ಪ್ರತ್ಯೇಕ ಕೂಟಗಳನ್ನು ಆಯೋಜಿಸಲಾಗುವುದು. ಅದಕ್ಕೆ ಧಕ್ಕೆಯಾಗದಂತೆಯೇ ಮುಂದುವರಿಯಲು ನಿಗಾ ವಹಿಸಲಾಗುವುದು. ಜಿಲ್ಲಾಡಳಿತ ಸಹಕಾರದ ಭರವಸೆ ನೀಡಿದೆ ಎಂದರು.
ನ್ಯಾಯಾಲಯ ರಾಜ್ಯದ ಯಾವ ಮೂಲೆಯಲ್ಲಿಯೂ ಕಂಬಳ ನಡೆಸಲು ಯಾರೂ ಅಡ್ಡಿಮಾಡುವಂತಿಲ್ಲ ಎಂದು ಹೇಳಿದೆ. ಪಿಲಿಕುಳ ಕಂಬಳದ ಪ್ರಕರಣ ನಡೆಯುತ್ತಿದೆ. ಅದರ ತೀರ್ಪು ಹೊರಬೀಳಲಿದೆ. ಉಳಿದಂತೆ ಎಲ್ಲ ಕಡೆ ಹಸಿರುನಿಶಾನೆ ದೊರೆತಿದೆ. ಮೈಸೂರಿನಲ್ಲಿ ಕಂಬಳ ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಆಸಕ್ತಿ ತೋರಿಸಿದ್ದಾರೆ. ಅಲ್ಲಿ ಕಂಬಳಕ್ಕೆ ಪೂರಕವಾದ 20 ಎಕರೆ ಜಾಗವಿದೆ. ತಜ್ಞರು ಪ್ರಸ್ತಾವಿತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಾಧ್ಯವಾದರೆ ಏಪ್ರಿಲ್ ಅನಂತರ ಅಲ್ಲಿ ಕಂಬಳ ನಡೆಸಲಾಗುವುದು. ಬೆಂಗಳೂರಿನಲ್ಲಿ ಕಂಬಳ ನಡೆಸಲು ಈ ಬಾರಿ ಬೇಡಿಕೆ ಬಂದಿಲ್ಲ ಎಂದು ಹೇಳಿದರು. ಅಸೋಸಿಯೇಷನ್ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚೂರು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪಿ.ಆರ್.ಶೆಟ್ಟಿ ಅರುಣ್ ಕುಮಾರ್ ಶೆಟ್ಟಿ, ಕಂಬಳ ಸಂಘಟಕ ಸಂದೀಪ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.