ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ನ.28ರಂದು ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಸ್ವತ್ಛತೆ ಸಹಿತ ವಿವಿಧ ಕಾಮಗಾರಿಗಳು ಚುರುಕು ಗೊಂಡಿವೆ ಮತ್ತು ಆದಿಉಡುಪಿಯಲ್ಲಿ ನಾಲ್ಕನೇ ಹೆಲಿಪ್ಯಾಡ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಪ್ರಧಾನಿಯವರ ಹೆಲಿಕಾಪ್ಟರ್ ಇಳಿಯಲು ಅನುಕೂಲ ಆಗುವಂತೆ ಆದಿಉಡುಪಿ ಹೆಲಿಪ್ಯಾಡ್ ಪ್ರದೇಶದಲ್ಲಿ ಹೊಸದಾಗಿ ಹೆಲಿಕಾಪ್ಟರ್‌ಲಾಂಚರ್ ನಿರ್ಮಾಣ ಕಾಮಗಾರಿ ಈಗಾಗಲೇ ಶುರುವಾಗಿದೆ. ಹೆಲಿಪ್ಯಾಡ್ ನಿರ್ಮಾಣ ಸಂಬಂಧ ಇತ್ತೀಚಿಗೆ ನಡೆದ ಸಭೆ ಯಲ್ಲಿ ಜಿಲ್ಲಾಡಳಿತ ತೀರ್ಮಾನ ತೆಗೆದುಕೊಂಡಿತ್ತು. ಆದಿಉಡುಪಿ ಹೆಲಿಪ್ಯಾಡ್‌ನಲ್ಲಿ ಮೂರು ಹೆಲಿಕಾಪ್ಟರ್ ಲಾಂಚರ್ ಇದೆ. ಇದರ ನಿರ್ವಹಣೆ ಮಾಡುತ್ತಿರುವ ಎನ್‌ಸಿಸಿ ಕಚೇರಿಯ ಸಮೀಪವೇ ಒಂದು ಹೆಲಿಪ್ಯಾಡ್ ಇರುವುದರಿಂದ ಅಲ್ಲಿ ಪ್ರಧಾನಿಯವರ ಹೆಲಿಕಾಪ್ಟರ್ ಇಳಿಸುವುದು ಕಷ್ಟ. ಹೀಗಾಗಿ ಹೊಸ ಹೆಲಿಪ್ಯಾಡ್ ಸುಮಾರು 65-75 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸ ಲಾಗುತ್ತಿದೆ. ಇದರ ಜತೆಗೆ ಉಳಿದ ಮೂರು ಹೆಲಿಪ್ಯಾಡ್‌ಗಳ ಸ್ವಚ್ಚತೆ, ಹೆಲಿಪ್ಯಾಡ್ ಒಳಗೆ ಒಂದಕ್ಕೊಂದು ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ, ಹೆಲಿಪ್ಯಾಡ್ ಪ್ರದೇಶದಲ್ಲಿ ಬೆಳೆದಿರುವ ಹುಲ್ಲುಗಳ ಕಟಾವು ಇತ್ಯಾದಿ ವೇಗವಾಗಿ ಸಾಗುತ್ತಿದೆ.
ಹೆಲಿಪ್ಯಾಡ್ ಎದುರು ಎಪಿಎಂಸಿ ಇರುವುದರಿಂದ ಪ್ರಧಾನಿ ಮೋದಿ ಯವರು ಬರುವ ಸಂದರ್ಭದಲ್ಲಿ ಆ ಪ್ರದೇಶ ದಲ್ಲಿ ಸ್ವಚ್ಛತೆ ಅತಿ ಆವಶ್ಯಕವಾಗಿದೆ. ಪ್ರತಿ ಬುಧವಾರ ಸಂತೆ ಹಾಗೂ ನಿತ್ಯವೂ ದಿನವಾಹಿ ಮಾರುಕಟ್ಟೆ ವಹಿವಾಟು ಇರುತ್ತದೆ. ಮೋದಿ ಆಗಮನದ ಹಿನ್ನೆಲೆ ಯಲ್ಲಿ ಕೆಲವು ದಿನ ವಹಿವಾಟು ಸ್ಥಗಿತವೂ ಆಗಬಹುದು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಬಹುದು. ಆದರೆ ಎಂಪಿಎಂಸಿ ನಿರ್ವಹಣ ಸಮಿತಿ ಹಾಗೂ ಜಿಲ್ಲಾಡಳಿತಕ್ಕೆ ಇಲ್ಲಿನ ಸ್ವಚ್ಛತೆಯೇ ದೊಡ್ಡ ಸವಾಲಾಗಿದೆ. ಮಲ್ಪೆ-ತೀರ್ಥಹಳ್ಳಿ ರಾ.ಹೆ.169ಎ ಚತುಷ್ಪಥ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಆದಿಉಡುಪಿಯಿಂದ ಕರಾವಳಿ ಬೈಪಾಸ್ ವರೆಗಿನ ರಸ್ತೆಗೆ ಕಾಂಕ್ರೀಟ್ ಹಾಕುವ ಪ್ರಕ್ರಿಯೆ ಚುರುಕುಗೊಂಡಿದೆ. ಒಂದು ಭಾಗದ ಕಾಂಕ್ರೀಟ್ ರಸ್ತೆ ನಿರ್ಮಾಣ ಪೂರ್ಣ ಗೊಂಡಿದ್ದು ಇನ್ನೊಂದು ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಒಂದೆರಡು ದಿನಗಳಲ್ಲಿ ಮುಗಿಯಲಿದೆ. ರಸ್ತೆ ಕಾಮ ಗಾರಿ ಗಾಗಿ ಆದಿಉಡುಪಿ ಮೂಲಕ ಮಲ್ಪೆ ಸಾಗುವ ರಸ್ತೆಯನ್ನು ಬಂದ್ ಮಾಡಿ ತಾತ್ಕಾಲಿಕ ವಾಗಿ ಪರ್ಯಾಯ ವ್ಯವಸ್ಥೆ ಯನ್ನು ಸೂಚಿಸಲಾಗಿದೆ.