ಉಜಿರೆ: ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತದ ಸರ್ವಧರ್ಮಗಳೂ ಸತ್ಯ, ಅಹಿಂಸೆ, ಪರೋಪಕಾರ, ಸೇವೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ ವಿಶ್ವವೇ ಒಂದು ಕುಟುಂಬ ಎಂದು ಭಾವಿಸುವ ವಿಶಾಲ ಮನೋಭಾವ ನಮ್ಮದಾಗಿದೆ. ನಮ್ಮ ಧರ್ಮವನ್ನು ಪ್ರೀತಿಸಿ ಅನುಷ್ಠಾನಗೊಳಿಸುವದರೊಂದಿಗೆ ಇತರರ ಧರ್ಮವನ್ನೂ ಗೌರವಿಸುವುದು ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ಜೀವಾಳವಾಗಿದೆ. ಮಾನವ ಸೇವೆಯೇ ಶ್ರೇಷ್ಠ ಧರ್ಮ ಎಂದು ಸಚಿವ ಡಾ. ಎಂ.ಬಿ. ಪಾಟೀಲ್ ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದ ತೊಂಭತ್ತಮೂರನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿ, ಸರ್ವಧರ್ಮ ಸಮನ್ವಯ ಕೇಂದ್ರವಾಗಿ ಸರ್ವಧರ್ಮೀಯರಿಗೂ ಸೇವೆ ನೀಡುವ ಧರ್ಮಸ್ಥಳ ಅನುಪಮ ಶ್ರದ್ಧಾ-ಭಕ್ತಿಯ ಕೇಂದ್ರವಾಗಿದೆ. ಇಲ್ಲಿನ ಧರ್ಮಸಹಿಷ್ಣುತೆ, ಚತುರ್ವಿದ ದಾನ ಪರಂಪರೆ, ಮಾನವೀಯ ಸೇವೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಮಾನವ ಸೇವೆಯೇ ಶ್ರೇಷ್ಠ ಧರ್ಮವಾಗಿದ್ದು ಲಕ್ಷದೀಪೋತ್ಸವ ಪ್ರತಿ ಮನೆಯಲ್ಲಿಯೂ, ಪ್ರತಿಯೊಬ್ಬರ ಮನದಲ್ಲಿಯೂ ವಿಶ್ವಸಾಮರಸ್ಯದ ಬೆಸುಗೆಯನ್ನು ಬೆಸೆಯಲಿ. ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಶಾಂತಿ, ಸಾಮರಸ್ಯದ ಸೌಹಾರ್ದಯುತ ಬದುಕಿಗೆ ಲಕ್ಷದೀಪೋತ್ಸವ ನಾಂದಿಯಾಗಲಿ. ಲಕ್ಷದೀಪೋತ್ಸವದ ಹೊಂಬೆಳಕಿನಲ್ಲಿ ನೈತಿಕತೆ, ಸೇವೆ ಜೀವನ ಮೌಲ್ಯಗಳು ನಿರಂತರ ನಂದಾದೀಪವಾಗಿ ಸರ್ವರ ಸಾರ್ಥಕ ಬದುಕಿಗೆ ದಾರಿದೀಪವಾಗಲಿ ಎಂದು ಅವರು ಹಾರೈಸಿದರು.
ಸಮಾಜಸೇವೆಯೊಂದಿಗೆ ಪರಿಸರ ಸಂರಕ್ಷಣೆಯನ್ನೂ ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು. ವಿಜಯಪುರ ಜಿಲ್ಲೆಯಲ್ಲಿ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡಿರುವ ಸಮಾಜ ಸೇವಾ ಕಾರ್ಯಗಳನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.
ಮಂಜುವಾಣಿ ಮಾಸಪತ್ರಿಕೆಯಲ್ಲಿ ಪ್ರಕಟಿಸಿದ “ಮಗಳಿಗೊಂದು ಪತ್ರ” ಅಂಕಣ ಬರಹಗಳ ಸಂಕಲವನ್ನು ಸಚಿವ ಡಾ. ಎಂ.ಬಿ. ಪಾಟೀಲ್ ಬಿಡುಗಡೆಗೊಳಿಸಿದರು.
ಡಿ. ವೀರೇಂದ್ರ ಹೆಗ್ಗಡೆಯವರ ಅಂಕಣ ಬರಹಗಳ ಸಂಗ್ರಹ “ಧರ್ಮದರ್ಶನ” ವನ್ನು ಪೂಜ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ ಹರಿಹರಪುರದ ಪೂಜ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವೈವಿಧ್ಯತೆಯನ್ನು ನಾವು ಸಹಜವಾಗಿ ಸ್ವೀಕರಿಸಿ, ಹೃದಯದಿಂದ ಒಪ್ಪಿ ಸಮನ್ವಯ ದೃಷ್ಠಿಕೋನದಿಂದ ಮಾನವೀಯತೆ ಮೂಲಕ ವಿಶ್ವವೇ ಒಂದು ಕುಟುಂಬ ಎಂದು ಭಾವಿಸಿದರೆ ಸುಖ-ಶಾಂತಿ, ನೆಮ್ಮದಿಯ ಸಾರ್ಥಕ ಜೀವನ ಸಾಧ್ಯವಾಗುತ್ತದೆ ಎಂದರು.
ಸತ್ಯ ಒಂದೇ ಆದರೂ ಮಾರ್ಗಗಳು ಅನೇಕ. ನಮಗೆ ಇಷ್ಟವಾಗದೇ ಇರುವ ವಿಚಾರವನ್ನು ನಾವು ಇತರರಿಗೂ ತಲುಪಿಸಬಾರದು. ಸುಳ್ಳು ಹೇಳುವುದು, ಅವಮಾನ, ಶೋಷಣೆ, ಇತ್ಯಾದಿ ನಮಗೆ ಇಷ್ಟವಾಗುವುದಿಲ್ಲ. ಆದುದರಿಂದ ಇದನ್ನು ನಾವು ಇತರರಿಗೂ ಮಾಡಬಾರದು. ಮಾನವೀಯತೆ ಮೂಲಕ ಇಡೀ ವಿಶ್ವವೇ ಒಂದು ಕುಟುಂಬ ಎಂದು ಭಾವಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಪ್ರಜಾವಾಣಿ ಪತ್ರಿಕೆಯ ಉಪಸಂದಾಕ ಎಸ್. ಸೂರ್ಯಪ್ರಕಾಶ್ ಪಂಡಿತ್ ಮಾತನಾಡಿ, ಸನಾತನ ಧರ್ಮವು ಶಾಶ್ವತವೂ, ನೂತನವೂ ಆಗಿದ್ದು ಸರ್ವರಿಗೂ ಸಾಮರಸ್ಯಕ್ಕೆ ಸಮಾನ ಅವಕಾಶ ನೀಡುತ್ತದೆ. ಬಾಹುಬಲಿ ಮೂರ್ತಿ ಶಾಶ್ವತವೂ, ನೂತನವೂ ಆಗಿದೆ. ದೇವನೊಬ್ಬ ನಾಮ ಹಲವು ಎನ್ನುವಂತೆ ನಾವು ವಿವಿಧ ಹೆಸರುಗಳಿಂದ ದೇವರನ್ನು ಆರಾಧಿಸುತ್ತೇವೆ. ಗ್ರಂಥ ರಚನೆ, ಕೆರೆ ಕಟ್ಟಿಸುವುದು, ಬಡವರಿಗೆ ಸಹಾಯ ಮಾಡುವುದು, ಸೇವೆ, ಗಿಡ-ಮರ ಬೆಳೆಸುವುದು - ಹೀಗೆ ಇತರರಿಗೆ ಒಳಿತನ್ನು ಉಂಟು ಮಾಡುವ ಎಲ್ಲಾ ಕಾರ್ಯಗಳು ದೇವರ ಪೂಜೆಗೆ ಸಮಾನವಾಗಿದೆ. ಸಮುದಾಯದ ಚಿಂತನೆಯೊಂದಿಗೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಾಲುಮರದ ತಿಮ್ಮಕ್ಕ ತನಗೆ ಮಕ್ಕಳಿಲ್ಲದಿದ್ದರೂ, ಗಿಡಮರಗಳನ್ನು ಮಕ್ಕಳಂತೆ ಪ್ರೀತಿಯಿಂದ ಬೆಳೆಸಿದರು. ಹೀಗೆ ಲೋಕಕ್ಕೆ ಒಳಿತನ್ನು ಮಾಡುವ ಗಿಡ ಮರಗಳು, ಪ್ರಾಣಿ-ಪಕ್ಷಿಗಳು ಕೂಡಾ ಆರಾಧನೆಗೆ ಯೋಗ್ಯವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಬಂದ ಅಂಕಣಕಾರ ತನ್ವೀರ್ ಅಹಮ್ಮದ್ ಉಲ್ಲಾ ಮಾತನಾಡಿ, ಸತ್ಯಮೇವಜಯತೇ ಎನ್ನುವಂತೆ ಸತ್ಯ ಯಾವಗಲೂ ಗೆಲ್ಲುತ್ತದೆ, ಸುಳ್ಳು ಸೋಲುತ್ತದೆ ಎಂದರು.
ತಾನು ಕನ್ನಡವನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ ಅವರು ಧರ್ಮಸ್ಥಳದ ಬಹುಮುಖಿ ಸೇವಾಕಾರ್ಯಗಳನ್ನು ಕಂಡು ಆಶ್ಚರ್ಯಚಕಿತನಾಗಿದ್ದೇನೆ ಎಂದು ಹೇಳಿದರು. ಪ್ರೀತಿ, ಪ್ರೇಮ, ನಂಬಿಕೆ ಮತ್ತು ವಿಶ್ವಾಸ ಇದ್ದಲ್ಲಿ ಸತ್ಯ ಮತ್ತು ಧರ್ಮ ನೆಲೆಸಿರುತ್ತದೆ.
ಪಾದಯಾತ್ರೆ ತನಗೆ ಅಮೂಲ್ಯ ಜೀವನಪಾಠ ಕಲಿಸಿದೆ. ಹತ್ತು ಸಾವಿರ ಮಂದಿಯನ್ನು ಪಾದಯಾತ್ರೆಯಲ್ಲಿ ತಾನು ಭೇಟಿಯಾಗಿ ಅಪಾರ ಲೋಕಾನುಭವ ಪಡೆದೆ ಎಂದು ಸಂತಸ ವ್ಯಕ್ತ ಪಡಿಸಿದರು. ತನ್ನ ಜೊತೆಗೆ ಬಂದ ಮಿತ್ರರನ್ನೂ ಅವರು ಧನ್ಯತೆಯಿಂದ ಸ್ಮರಿಸಿದರು.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಪೂರನ್ ವರ್ಮ ಉಪಸ್ಥಿತರಿದ್ದರು.
ಬೆಳಾಲು ತಿಮ್ಮಪ್ಪ ಗೌಡ ಧನ್ಯವಾದವಿತ್ತರು. ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.